ಬೆಂಗಳೂರು: ಕನ್ನಡ ಕಿರುತೆರೆ ಧಾರವಾಹಿಗಳು ಈಗ ಯಾವ ಸಿನಿಮಾಗೂ ಕಮ್ಮಿಯಿಲ್ಲ ಎನ್ನುವ ರೀತಿ ಜನಪ್ರಿಯವಾಗಿದೆ. ಆದರೆ ಹೆಚ್ಚಿನ ಧಾರವಾಹಿಗಳಲ್ಲಿ ಈಗ ಸಿನಿಮಾ ಕತೆಗಳನ್ನೇ ನಕಲು ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ.
ಉದಾಹರಣೆಗೆ ಗಟ್ಟಿಮೇಳ ಧಾರವಾಹಿಯಲ್ಲಿ ಈಗ ಮಂಜುನಾಥ್ ಮತ್ತು ಮಗಳು ಅಂಜಲಿ ಮೇಲೆ ಕೊಲೆ ಆರೋಪವಿದ್ದು, ಅದರಿಂದ ರಕ್ಷಿಸಿಕೊಳ್ಳಲು ಅವರು ಮಾಡುತ್ತಿರುವ ಪ್ರಯತ್ನ ದೃಶ‍್ಯಂ ಸಿನಿಮಾವನ್ನು ನೆನಪಿಸುವಂತಿದೆ. ಹೀಗಾಗಿ ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ದೃಶ್ಯಂ ಕತೆ ನಕಲು ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ.
ಇನ್ನು, ಇತ್ತೀಚೆಗೆ ಭಾರೀ ಸದ್ದು ಮಾಡಿದ್ದು ಕಲರ್ಸ್ ವಾಹಿನಿಯ ರಾಮಚಾರಿ ಧಾರವಾಹಿಯ ಮದುವೆ ಸೀನ್. ನಾಯಕ ಮತ್ತು ನಾಯಕಿ ಗುಟ್ಟಾಗಿ ಮದುವೆಯಾಗಿ ಮನೆಯವರಿಗೂ ಹೇಳದೇ ತಮ್ಮ ಮನೆಯಲ್ಲೇ ಇರುತ್ತಾರೆ. ಆದರೆ ನಾಯಕಿಗೆ ಬೇರೊಬ್ಬನೊಂದಿಗೆ ಮದುವೆ ಮಾಡಿಸುವ ಸಂದರ್ಭದಲ್ಲಿ ಮದುವೆ ಗುಟ್ಟು ಹೊರಬೀಳುತ್ತದೆ. ಈಗ ನಾಯಕನ ಮನೆಯಲ್ಲಿ ಆತನನ್ನು ಮನೆಯಿಂದ ಹೊರಗಟ್ಟಿದ್ದಾರೆ. ಈ ಮದುವೆ ದೃಶ್ಯಗಳು ತಮಿಳಿನ ಸೂಪರ್ ಹಿಟ್ ಸಿನಿಮಾ ಅಲೈಪಾಯುದೇ ಕತೆಯನ್ನು ಹೋಲುತ್ತಿದೆ.
ಇನ್ನು, ಕನ್ನಡ ಕಿರುತೆರೆಯ ನಂ.1 ಧಾರವಾಹಿ ಎನಿಸಿಕೊಂಡಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಈಗ ನಡೆಯುತ್ತಿರುವ ದೃಶ‍್ಯಗಳನ್ನು ನೋಡುತ್ತಿದ್ದರೆ ಪ್ರೇಕ್ಷಕರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿಪಾಯಿ ಸಿನಿಮಾ ನೆನಪಾಗುತ್ತಿದೆ. ಈ ಧಾರವಾಹಿಯಲ್ಲಿ ಈಗ ನಾಯಕ ಬಲವಂತವಾಗಿ ತಾನು ಪ್ರೀತಿಸಿದ ನಾಯಕಿಯನ್ನು ಮದುವೆಯಾಗಿ ಮನೆಗೆ ಎಳೆದೊಯ್ಯುತ್ತಾನೆ. ನಾಯಕ ಕಂಠಿ ಮಾಡುವ ಅಭಿನಯವನ್ನು ನೋಡುವಾಗ ಸಿಪಾಯಿಯ ರವಿಚಂದ್ರನ್ ನೆನಪಾಗುತ್ತಾರೆ.
ಇದೇ ರೀತಿ ಹಲವು ಬಾರಿ ಕನ್ನಡ ಕಿರುತೆರೆ ಧಾರವಾಹಿಗಳು ಸೂಪರ್ ಹಿಟ್ ಸಿನಿಮಾಗಳ ಕತೆಯ ಎಳೆಯನ್ನಿಟ್ಟುಕೊಂಡು ಕೆಲವು ಸೀಕ್ವೆನ್ಸ್ ಮಾಡಿ ಗೆದ್ದಿವೆ.