Select Your Language

Notifications

webdunia
webdunia
webdunia
webdunia

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ರಾಧಾ ರಮಣ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ರಾಧಾ ರಮಣ
Bangalore , ಗುರುವಾರ, 12 ಜನವರಿ 2017 (13:58 IST)
ಸದಾ ಹೊಸತನದ, ಸೃಜನಾತ್ಮಕ  ಕತೆಗಳನ್ನು ಪರಿಚಯಿಸುತ್ತಾ ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಮೂಡಿಸಿರುವ ಕಲರ್ಸ್ ಕನ್ನಡ ವಾಹಿನಿ ಇದೀಗ ಮತ್ತೊಂದು ವಿನೂತನ ಕತೆಯನ್ನು ಪರಿಚಯಿಸುತ್ತಿದೆ, ಅದುವೇ ರಾಧಾರಮಣ.
 
ಬಿಗ್‍ಬಾಸ್ ರಿಯಾಲಿಟಿ ಶೋ ದ ಜಾಗವನ್ನು ತುಂಬಲು ಸಿದ್ಧವಾಗುತ್ತಿರುವ ಅಪರೂಪದ ಕತೆ ರಾಧಾ ರಮಣ. ಜನವರಿ 16ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ರಾಧಾ ರಮಣ ಒಡಹುಟ್ಟಿದವರ ಬಾಂಧವ್ಯ ಬೆಸೆಯುವ ಕತೆ. ಹುಟ್ಟುತ್ತಾ ಒಡಹುಟ್ಟಿದವರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತು ಸದಾ ಸತ್ಯ. ಒಂದೇ ತಾಯಿಯ ಮಡಿಲಿನಲ್ಲಿ ಹುಟ್ಟಿದವರೂ ವರ್ತನೆ, ಸ್ವಭಾವದಲ್ಲಿ ತದ್ವಿರುದ್ಧರಾಗಿರುವುದು ಸಾಮಾನ್ಯ. ಆದರೆ ರಮಣನ ಕುಟುಂಬ ವಿಭಿನ್ನ ಮತ್ತು ವಿಶೇಷ. 
 
ಇಲ್ಲಿ ದಾಯಾದಿಗಳ ಹಗೆತನ ಇಲ್ಲ. ಕೋಟಿ ಕೋಟಿ ದುಡ್ಡಿದೆ. ಆದರೆ ಕೋಟಿಗಿಂತಲೂ ಮಿಗಿಲಾದ ಪ್ರೀತಿ ಇದೆ. ವಿಶೇಷವಾಗಿ ಆ ಮನೆಯ ಅಣ್ಣ - ತಂಗಿಯರನ್ನು ನೋಡಿದರೆ ಎಂಥವರಿಗೂ ಹೊಟ್ಟೆ ಕಿಚ್ಚಾಗುವುದು ಸಹಜ. ಕಲರ್ಸ್ ಕನ್ನಡ ಮತ್ತು ಸೂಪರ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಹೇಳುವಂತೆ- "ಧಾರಾವಾಹಿಗಳು ವಾಹಿನಿಯನ್ನು ಸಧೃಡವಾಗಿರಿಸಿ, ಮೇಲ್ಮಟ್ಟಕ್ಕೇರಿಸುತ್ತವೆ. 
 
ರಾಧಾ ರಮಣ ಒಂದು ಧನಾತ್ಮಕ ಕತೆ. ಸಂಬಂಧಗಳು ಮೌಲ್ಯವನ್ನು ಕಳೆದುಕೊಳುತ್ತಿರುವ ಸಂದರ್ಭದಲ್ಲಿ, ಜವಾಬ್ದಾರಿಗಳಿಂದ ದೂರ ಸರಿಯುವ ಒಡಹುಟ್ಟಿದವರಿಗೊಂದು ಸೂಕ್ತ ಪಾಠವಾಗಬಲ್ಲದು ಈ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯು ಇಲ್ಲಿಯವರೆಗೂ ಫ್ರೆಶ್ ಕಂಟೆಂಟ್ ನೀಡಿದೆ. ಈಗಲೂ ಅದೇ ಹಾದಿಯಲ್ಲಿ ಮುಂದುವರೆಯುತ್ತಿದೆ. ಪ್ರೈಮ್ ಟೈಮ್‍ನಲ್ಲಿ ಪ್ರಸಾರವಾಗುವ ರಾಧಾ ರಮಣ ಕೂಡ ವೀಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ನನ್ನದು." 
 
ಕಲರ್ಸ್ ಕನ್ನಡ ವಾಹಿನಿಯ ಫಿಕ್ಷನ್ ಹೆಡ್ ಹಾರೀಸ್ ಹೇಳುವಂತೆ, "ಕನ್ನಡ ಸಂಸ್ಕೃತಿಯನ್ನು ಸಾರುವ, ಮನೆ-ಮನೆಗಳಿಗೆ ಹತ್ತಿರವಾಗುವ ಮತ್ತು ಯಾವಾಗಲೂ ಪಾಸಿಟಿವ್ ಯೋಚನೆಗಳನ್ನು ಪ್ರೇರೇಪಿಸುವ ಕತೆಗಳನ್ನು ನೀಡಬೇಕು ಎನ್ನುವುದು ನಮ್ಮ ಗುರಿ. ಈವರೆಗೆ ನಮ್ಮ ಚಾನೆಲ್ ಅಂತಹ ಹತ್ತು ಹಲವು ಧಾರಾವಾಹಿಗಳನ್ನು ನೀಡಿದೆ. 'ರಾಧಾ ರಮಣ' ಕೂಡಾ ಅಂತಹ ಒಂದು ಕತೆ. 
 
ಕನ್ನಡ ಪ್ರಾಧ್ಯಾಪಕಿ ಆರಾಧನಾ ಮತ್ತು ಬ್ಯುಸಿನೆಸ್‍ನಲ್ಲಿ ತೊಡಗಿರುವ ಇಂಗ್ಲಿಷ್ ಹುಡುಗ ರಮಣನ ನಡುವೆ ನಡೆಯುವ ಕತೆ. ಆರಾಧನಾ ಅಣ್ಣ ಮತ್ತು ರಮಣನ ತಂಗಿಗೆ ನಡೆಯುವ ಮದುವೆ ಜೊತೆ ಆರಂಭವಾಗುವ ಈ ಧಾರಾವಾಹಿ, ಕನ್ನಡ ಮನಸುಗಳಿಗೆ ಹತ್ತಿರವಾಗುವುದರಲ್ಲಿ ಸಂಶಯವಿಲ್ಲ.”

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜೀವನ್‌ಸಾಥಿ ಡಾಟ್ ಕಾಮ್‍ನಲ್ಲಿ ನಟಿ ರಮ್ಯಾ!