ನವದೆಹಲಿ: ಡಬ್ಲ್ಯುಎಫ್ ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕಿರುಕುಳ ಆರೋಪ ಹೊರಿಸಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿರುವ ಕುಸ್ತಿಪಟುಗಳ ಪೈಕಿ ಸಾಕ್ಷಿ ಮಲಿಕ್ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿಯಿತ್ತು.
ನಿನ್ನೆ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ ಬಳಿಕ ಸಾಕ್ಷಿ ಮಲಿಕ್ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಕೆಲಸಕ್ಕೆ ಹಾಜರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಾಕ್ಷಿ ಮಲಿಕ್ ಇದು ಸುಳ್ಳು ಸುದ್ದಿ. ಸತ್ಯಕ್ಕಾಗಿ ಮಾಡುತ್ತಿರುವ ನಮ್ಮ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇನ್ನು, ಅಮಿತ್ ಶಾ ಕುಸ್ತಿಪಟುಗಳನ್ನು ಭೇಟಿ ಮಾಡಿದ ವೇಳೆ ಕಾನೂನು ಎಲ್ಲರಿಗೂ ಒಂದೇ. ಕಾನೂನಿನ ಪ್ರಕಾರವೇ ಬ್ರಿಜ್ ಭೂಷಣ್ ವಿರುದ್ಧ ತನಿಖೆ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.