Select Your Language

Notifications

webdunia
webdunia
webdunia
webdunia

ಪ್ಯಾರಾಲಿಂಪಿಕ್ಸ್ ವಿಜೇತರಿಗೆ ಪ್ರಧಾನಿ ಅಭಿನಂದನೆ

ಪ್ಯಾರಾಲಿಂಪಿಕ್ಸ್ ವಿಜೇತರಿಗೆ ಪ್ರಧಾನಿ ಅಭಿನಂದನೆ
ನವದೆಹಲಿ , ಶನಿವಾರ, 10 ಸೆಪ್ಟಂಬರ್ 2016 (12:40 IST)
ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿರುವ ಮರಿಯಪ್ಪನ್ ತಂಗವೇಲು ಮತ್ತು ವರುಣ್ ಸಿಂಗ್ ಭಾಟಿ ಅವರಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ. 

ಒಲಂಪಿಕ್ಸ್‌ನಲ್ಲಿ ದೇಶಕ್ಕೆ ಏಕೈಕ ಚಿನ್ನ ತಂದಿರುವ ಶೂಟರ್ ಅಭಿನವ್ ಬಿಂದ್ರಾ ಸೇರಿದಂತೆ ಅನೇಕ ದಿಗ್ಗಜರು ಸಾಧಕದ್ವಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 
 
"ಭಾರತ ಉಲ್ಲಸಿತವಾಗಿದೆ! ಚಿನ್ನ ಗೆದ್ದ ಮರಿಯಪ್ಪನ್ ತಂಗವೇಲು ಮತ್ತು ಕಂಚಿನ ಪದಕ ಗೆದ್ದ ವರುಣ್ ಸಿಂಗ್ ಭಾಟಿ ಅವರಿಗೆ ಅಭಿನಂದನೆಗಳು", ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. 
 
ಕ್ರೀಡಾ ಸಚಿವಾಲಯದ ನಗದು ಬಹುಮಾನ ಯೋಜನೆಯಡಿಯಲ್ಲಿ ಮರಿಯಪ್ಪನ್ 75 ಲಕ್ಷ ರೂಪಾಯಿಯನ್ನು ಪಡೆಯಲಿದ್ದಾರೆ. ಭಾಟಿ ಅವರಿಗೆ 30 ಲಕ್ಷ ದೊರೆಯಲಿದೆ. 
 
ರಿಯೋನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ ತೋರಿದ್ದು ಚಿನ್ನ ಮತ್ತು ಕಂಚಿನ ಮೂಲಕ ಖಾತೆ ತೆರೆದಿದೆ. ಪುರುಷರ ಹೈ ಜಂಪ್‌ ಟಿ-42 ವಿಭಾಗದಲ್ಲಿ ತಂಗವೇಲು ಚಿನ್ನಕ್ಕೆ ಮುತ್ತಿಕ್ಕಿದರೆ, ಇದೇ ಸ್ಪರ್ಧೆಯಲ್ಲಿ ಮತ್ತೊಬ್ಬ ಭಾರತೀಯ ವರುಣ್ ಭಾಟಿ ಕೂಡ ಕಂಚನ್ನು ಮುಡಿಗೇರಿಸಿಕೊಂಡಿದ್ದಾರೆ.  
 
ಮರಿಯಪ್ಪನ್ ತಂಗವೇಲು 1.89 ಮೀಟರ್ ದೂರ ಜಿಗಿದು ಚಿನ್ನ ಗೆದ್ದರು. ಇದು ಅವರ ವೈಯಕ್ತಿಕ ಶ್ರೇಷ್ಠ ದಾಖಲೆ ಕೂಡ. ಈ ಸಾಧನೆ ಮೂಲಕ 20 ವರ್ಷದ ತಂಗವೇಲು ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನ ತಂದುಕೊಟ್ಟ ಮೊದಲ ಭಾರತೀಯ ಎನ್ನಿಸಿಕೊಂಡರು. ಭಾಟಿ 1.86 ಮೀಟರ್ ದೂರಕ್ಕೆ ಜಿಗಿದು ಕಂಚನ್ನು ಪಡೆದುಕೊಂಡರು. ರಜತ ಪದಕ ಅಮೇರಿಕಾದ ಸ್ಯಾಮ್ ಗ್ರಿವ್ ಪಾಲಾಯಿತು.
 
ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ದೇಶಕ್ಕೆ ಚಿನ್ನ ತಂದುಕೊಟ್ಟ ಮೂರನೆಯ ಆಟಗಾರ ಎಂಬ ಹೆಗ್ಗಳಿಕೆಗೂ ತಂಗವೇಲು ಪಾತ್ರರಾಗಿದ್ದಾರೆ,  ಈ ಹಿಂದೆ ಮುರಳಿಕಾಂತ್ ಪೆಟ್ಕರ್ (ಹೈಡೆಲ್ಬರ್ಗ್-1972) ಈಜಿನಲ್ಲಿ ಮತ್ತು ದೇವೇಂದ್ರ ಝಾಜ್‌ಹರಿಯಾ (ಜಾವೆಲಿನ್, 2004 ಅಥೆನ್ಸ್) ಚಿನ್ನ ಗೆದ್ದಿದ್ದರು. 
 
ತಂಗವೇಲು ಮತ್ತು ಭಾಟಿ ಸಾಧನೆಯೊಂದಿಗೆ ಭಾರತದ ಪ್ಯಾರಾಲಿಂಪಿಕ್ಸ್‌ನಲ್ಲಿ ಪಡೆದಿರುವ ಪದಕಗಳ ಮೊತ್ತ 10 ಆದಂತಾಯಿತು. ಅದರಲ್ಲಿ ಮೂರು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳಾಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ತಂಡಕ್ಕೆ ಮರಳಿದ ಉಮರ್ ಅಕ್ಮಲ್