ಫುಟ್ಬಾಲ್ ದಂತಕತೆ ಪೀಲೆ ಬಳಿಯಿದ್ದ ಪದಕ, ಟ್ರೋಫಿ ಮುಂತಾದ ಅಮೂಲ್ಯ ವಸ್ತುಗಳ ಹರಾಜು ಪ್ರಕ್ರಿಯೆ ಲಂಡನ್‌ನಲ್ಲಿ ಮುಗಿದಿದ್ದು, ಅವರ ಅಮೂಲ್ಯ ವಸ್ತುಗಳು ಒಟ್ಟು 5 ದಶಲಕ್ಷ ಡಾಲರ್ ಹಣಕ್ಕೆ ಹರಾಜಾಗಿವೆ.
ಲಂಡನ್‌ನಲ್ಲಿ ನಡೆದ ಅಂತಿಮ ದಿನದ ಮಾರಾಟವು ಲಾಸ್ ಏಂಜಲಿಸ್ ಮೂಲದ ಹರಾಜು ಮನೆ ಜೂಲಿಯನ್ಸ್ ಉಸ್ತುವಾರಿಯಲ್ಲಿ ನಡೆದಿದ್ದು, 75 ವರ್ಷದ ಬ್ರೆಜಿಲ್ ಆಟಗಾರನ 1970ರ ಮೂರನೇ ಮತ್ತು ಅಂತಿಮ ವಿಶ್ವಕಪ್ ವಿಜೇತ ಪದಕಗಳು 346,000 ಪೌಂಡುಗಳಿಗೆ ಬಿಕರಿಯಾಗಿವೆ.
ಜೂಲಿಯನ್ಸ್ ಒಟ್ಟು ಮೂಲ ದರದ ಅಂದಾಜನ್ನು 3 ದಶಲಕ್ಷ ಡಾಲರ್‌ಗೆ ಇರಿಸಿದ್ದು, ಅದಕ್ಕಿಂತ ಹೆಚ್ಚು ಹಣಕ್ಕೆ ಬಿಕರಿಯಾಗಿರುವುದರಿಂದ ಸಂತಸಗೊಂಡಿದೆ. ಗುರುವಾರ ಮಾರಾಟವಾದ ಪೀಲೆಯವರ ಇನ್ನೊಂದು ವಸ್ತು 1000ನೇ ಗೋಲು ಬಾರಿಸಿದ್ದಕ್ಕೆ ಸಿಕ್ಕ ಪುರಸ್ಕಾರ. ಇದು 162,000 ಪೌಂಡ್‌ಗಳಿಗೆ ಬಿಕರಿಯಾಯಿತು. ಪೀಲೆ ಅವರ ಮೂರನೇ ವಿಶ್ವಕಪ್ ಯಶಸ್ಸಿನ ಬಳಿಕ ಜೂಲ್ಸ್ ರಿಮೆಟ್ ಟ್ರೋಫಿಯ ಪ್ರತಿರೂಪಕ್ಕೆ 395,000 ಪೌಂಡ್ ಹಣ ಸಿಕ್ಕಿದೆ. ಸ್ವಿಸ್ ವಾಚ್ ತಯಾರಿಕೆ ದೈತ್ಯ ಕಂಪನಿ ಹಬ್ಲೋಟ್ ಅದನ್ನು ಹರಾಜಿನಲ್ಲಿ ಖರೀದಿಸಿತು.
ಈ ಹರಾಜಿನಲ್ಲಿ ಬಂದ ಹಣದ ಭಾಗವನ್ನು ಪೀಲೆಗೆ ಆತ್ಮೀಯವಾಗಿದ್ದ ಬ್ರೆಜಿಲ್ ಅತೀ ದೊಡ್ಡ ಮಕ್ಕಳಾಸ್ಪತ್ರೆ ಪೆಕ್ವಿನ್ ಪ್ರಿನ್ಸಿಪ್ ನೆರವಿಗೆ ನೀಡಲಾಗುತ್ತದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ