ಭಾರತದ ಹಿರಿಯ ಟೆನ್ನಿಸ್ ಸ್ಟಾರ್ ಲಿಯಾಂಡರ್ ಪೇಸ್ ಗುರುವಾರ ಕೊನೆಗೂ ರಿಯೋಗೆ ಆಗಮಿಸಿದ್ದಾರೆ. ಆದರೆ ಒಲಿಂಪಿಕ್ ಗ್ರಾಮದಲ್ಲಿ ತಂಗಲು ಅವರಿಗೆ ಯಾವುದೇ ಕೋಣೆ ಗೊತ್ತುಮಾಡದಿರುವುದು ಪಯಸ್‌ಗೆ ತೀರಾ ನಿರಾಶೆವುಂಟು ಮಾಡಿದೆ.
ಪಯಸ್ ಆಗಮಿಸಿದ ಕೂಡಲೇ ತಮ್ಮ ಲಗೇಜನ್ನು ನಿಯೋಗದ ಉಸ್ತುವಾರಿ ರಾಕೇಶ್ ಗುಪ್ತಾ ಅವರ ಕೋಣೆಯಲ್ಲಿರಿಸಿದರು. ಪಯಸ್ ಡಬಲ್ಸ್ ಜೋಡಿ ರೋಹನ್ ಬೋಪಣ್ಣ ಜತೆ ಫ್ಲಾಟ್ ಶೇರ್ ಮಾಡಿಕೊಳ್ಳಲು ನಿರಾಕರಿಸಿದ್ದಾರೆಂಬ ವರದಿಯನ್ನು ಭಾರತದ ಆಡದಿರುವ ನಾಯಕ ಜೀಷನ್ ಅಲಿ ಅಲ್ಲಗಳೆದರು.
ಬೋಪಣ್ಣ ಜತೆ ಕೋಣೆ ಶೇರ್ ಮಾಡಲು ಪಯಸ್‌ಗೆ ಇಷ್ಟವಿಲ್ಲ ಎಂಬ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಆಗಸ್ಟ್ 6ರ ಪಂದ್ಯಕ್ಕೆ ಅವರು ಶೀಘ್ರದಲ್ಲಿ ಬಂದಿಲ್ಲವಾದರೂ ಬಂದ ತಕ್ಷಣ ಅಭ್ಯಾಸ ಮಾಡಿದ್ದು ಪಂದ್ಯಕ್ಕೆ ಸಿದ್ಧವಾಗಿದ್ದಾರೆ ಎಂದು ಜೀಷನ್ ಅಲಿ ಹೇಳಿದರು.
ಈ ನಡುವೆ ರೂಂ ಸಿಗದೇ ಇರುವುದರಿಂದ ಪಯಸ್ ಕೂಡ ನಿರಾಶರಾಗಿದ್ದಾರೆ. ನಾನು 6 ಒಲಿಂಪಿಕ್ಸ್‌ಗಳನ್ನು ಭಾರತದ ಪರ ಆಡಿದ್ದು, ನನಗೆ ಒಲಿಂಪಿಕ್ ಗ್ರಾಮದಲ್ಲಿ ತಂಗಲು ಸ್ಥಳಾವಕಾಶ ಕಲ್ಪಿಸಿಲ್ಲ. ನಾನು ನ್ಯೂಯಾರ್ಕ್‌ನಲ್ಲಿ ಟೂರ್ನಿ ಆಡುತ್ತಿದ್ದು ಮುಗಿದ ಕೂಡಲೇ ಇಲ್ಲಿಗೆ 10.45ರ ಫ್ಲೈಟ್‌ಗೆ ಆಗಮಿಸಿದ್ದೇನೆ ಎಂದು ಪಯಸ್ ಹೇಳಿದರು.
ಬೋಪಣ್ಣ, ಅಲಿ ಮತ್ತು ಟೀಂ ದೈಹಿಕ ತರಬೇತುದಾರ ಮೂರು ಕೋಣೆಗಳಲ್ಲಿ ತಂಗಿದ್ದು ಸಂಜೆ ಅಭ್ಯಾಸದ ಸೆಷನ್ ಬಳಿಕ ತಮಗೆ ಕೋಣೆ ಸಿಗುವುದೆಂದು ನಿರೀಕ್ಷಿಸುವುದಾಗಿ ಪಯಸ್ ಹೇಳಿದರು. ಪಯಸ್ ಮತ್ತು ಬೋಪಣ್ಣ ಆಗಸ್ಟ್ 6ರಂದು ರಾತ್ರಿ 7.30ಕ್ಕೆ ಪೋಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ