ಹೈದರಾಬಾದ್: ಪಿವಿ ಸಿಂಧು ಸೈನಾ ನೆಹ್ವಾಲ್ ರ ಜತೆಗೆ ಆಡುವುದನ್ನು ನೋಡಬೇಕು ಎಂದು ಅದೆಷ್ಟು ದಿನದಿಂದ ಅಭಿಮಾನಿಗಳು ಕಾಯುತ್ತಿದ್ದರೋ. ಅದನ್ನು ಕೊನೆಗೂ ನನಸಾಗಿಸಿಯೇ ಬಿಟ್ಟರು. ಅಷ್ಟೇ ಅಲ್ಲ ತನಗಿಂತ ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ರನ್ನು ಪಿವಿ ಸಿಂಧು ಸೋಲಿಸಿಯೇ ಬಿಟ್ಟರು.
ಈ ಪಂದ್ಯವನ್ನು ನೋಡಲು ಜನ ಕಿಕ್ಕಿರಿದು ತುಂಬಿದ್ದರು. ಮೈದಾನದಲ್ಲಿ ಅಭಿಮಾನಿಗಳು ಇಬ್ಬರೂ ಆಟಗಾರ್ತಿಯರನ್ನು ಹುರಿದುಂಬಿಸುತ್ತಿದ್ದರೆ, ಸಿಂಧು, 11-7, 11-8 ಅಂತರದಿಂದ ಸೈನಾರನ್ನು ಮಣ್ಣು ಮುಕ್ಕಿಸಿದರು. ಈ ಗೆಲುವಿನೊಂದಿಗೆ ಸಿಂಧು ಪ್ರತಿನಿಧಿಸುತ್ತಿರುವ ಚೆನ್ನೈ ತಂಡ ಫೈನಲ್ ಗೇರಿತು.
ಆದರೆ ಅಷ್ಟು ಸುಲಭವಾಗಿ ಸಿಂಧುಗೆ ಜಯ ಸಿಗಲಿಲ್ಲ. ತುಂಬಾ ಯೋಜನಾಬದ್ಧವಾಗಿ ಆಡಿದರೂ ಆರಂಭದಲ್ಲಿ ಹಲವು ತಪ್ಪುಗಳನ್ನು ಮಾಡಿದ ಸಿಂಧು ಕೊನೆಗೆ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.
ಪಂದ್ಯ ಮುಗಿದ ನಂತರ ಮಾತನಾಡಿದ ಸೈನಾ “ನಾನು ಈ ಆಟ ಗೆಲ್ಲಲು ಸಾಧ್ಯವಿರಲಿಲ್ಲ ಎಂದು ನನಗೆ ಗೊತ್ತಿತ್ತು. ಯಾಕೆಂದರೆ ನಾನು ಅಂಕಣದಲ್ಲಿ ಚೆನ್ನಾಗಿ ಮೂವ್ ಆಗುತ್ತಿರಲಿಲ್ಲ. ಆದರೆ ಆಕೆ ಉತ್ತಮವಾಗಿ ಆಡಿದರು” ಎಂದರು. ಇನ್ನು ಸಿಂಧು ಕೂಡಾ ಮಾತನಾಡಿ “ನನಗೆ ಗೊತ್ತು ಈ ಪಂದ್ಯದ ಬಗ್ಗೆ ಎಲ್ಲರೂ ಎಕ್ಸೈಟ್ ಆಗಿರುತ್ತಾರೆ ಅಂತ. ಆದರೆ ಕೆರೊಲಿನಾ ಮಾರಿನ್ ಅವರನ್ನೆಲ್ಲಾ ಸೋಲಿಸಿದ ಮೇಲೆ ನನಗೆ ಆತ್ಮ ವಿಶ್ವಾಸ ಬಂದಿತ್ತು. ಹಾಗಾಗಿ ಚೆನ್ನಾಗಿ ಆಡಿದೆ” ಎಂದು ಸಿಂಧು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ