ಕಳೆದ ತಿಂಗಳು ಒಲಿಂಪಿಕ್ಸ್ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ಸಾಂಬಾ ನಾಡು ಬ್ರೆಜಿಲ್‌ನಲ್ಲಿ ಬುಧವಾರ ರಾತ್ರಿ ಮತ್ತೊಂದು ಕ್ರೀಡಾ ಹಬ್ಬ ಪ್ಯಾರಾಲಿಂಪಿಕ್ಸ್‌ಗೆ ಚಾಲನೆ ನೀಡಲಾಗಿದೆ.
ದಕ್ಷಿಣ ಅಮೇರಿಕದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಯಾಗಿರುವ 15ನೇ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ವರ್ಣರಂಜಿತ ಸಮಾರಂಭದಲ್ಲಿ ಸಾಂಬಾ ನಾಡಿನ ಸಂಪ್ರದಾಯದ ವೈಭವಯುತ ಅನಾವರಣವಾಯಿತು.
ಕಿಕ್ಕಿರಿದು ತುಂಬಿದ್ದ ಜನಸಾಗರ ಬಾಣಬಿರುಸುಗಳ ಸುಂದರ ಚಿತ್ತಾರ, ನೃತ್ಯಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಸಿಕೊಂಡಿತು.
ಸೆಪ್ಟೆಂಬರ್ 18ರವರೆಗೆ ಅಂದರೆ ಒಟ್ಟು 11ದಿನ ಪಂದ್ಯಾವಳಿ ನಡೆಯುತ್ತಿದ್ದು ಒಟ್ಟು 23 ಕ್ರೀಡೆಯ 528 ವಿಭಾಗಗಳಲ್ಲಿ ಪೈಪೋಟಿ ನಡೆಯಲಿದೆ.
ಒಟ್ಟು 162 ರಾಷ್ಟ್ರಗಳು ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು 1,500ಕ್ಕೂ ಹೆಚ್ಚು ಕ್ರೀಡಾಳುಗಳು ಭಾಗವಹಿಸುತ್ತಿದ್ದಾರೆ. ಭಾರತದಿಂದ 17 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ.
1960ರಿಂದ ಪ್ರಾರಂಭವಾದ ಈ ಕ್ರೀಡಾಕೂಟದಲ್ಲಿ ಭಾರತ ಈ ವರೆಗೆ 8 ಪದಗಳನ್ನಷ್ಟೇ ಗೆಲ್ಲಲು ಶಕ್ತವಾಗಿದೆ.
ರಿಯೋ ಓಲಂಪಿಕ್ಸ್ ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ಘೋಷಿಸಿದ್ದ ಕೇಂದ್ರ ಕ್ರೀಡಾ ಸಚಿವಾಲಯ ಚಿನ್ನ ಗೆದ್ದವರಿಗೆ 75 ಲಕ್ಷ, ಬೆಳ್ಳಿ ಗೆದ್ದವರಿಗೆ 50 ಲಕ್ಷ ಮತ್ತು ಕಂಚು ಗೆದ್ದವರಿಗೆ 30 ಲಕ್ಷ ನೀಡುವುದಾಗಿ ಘೋಷಿಸಿದೆ.
2004ರಲ್ಲಿ ನಡೆದ ಅಥೆನ್ಸ್ ಓಲಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದಿದ್ದ ದೇವೇಂದ್ರ ಜಜಾರಿಯಾ ಈ ಬಾರಿ ಸಹ ಆ ನಿರೀಕ್ಷೆಯನ್ನಿಟ್ಟಿದ್ದಾರೆ.
ಪವರ್ ಲಿಫ್ಟರ್ ಫರ್ಮಾನ್ ಬಾಷಾ -ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಕ್ರೀಡಾಪಟುವಾಗಿದ್ದಾರೆ.
ಭಾರತ ತಂಡ : ಪೂಜಾ (ಆರ್ಚರಿ), ನರೇಶ್ ಕುಮಾರ್ ಶರ್ಮಾ (ಶೂಟಿಂಗ್), ಶರದ್ ವರುಣ್ ಸಿಂಗ್ ಭಾಟಿ (ಹೈಜಂಪ್), ಮರಿಯಪ್ಪನ್ ತಂಗವೇಲು (ಹೈಜಂಪ್), ಶರದ್ ಕುಮಾರ್ (ಹೈ ಜಂಪ್), ರಾಂಪಾಲ್ (ಹೈ ಜಂಪ್) ಸುಂದರ್ ಸಿಂಗ್ ಗುರ್ಜಾರ್ (ಜಾವೆಲಿನ್) , ದೇವೇಂದ್ರ ಜಜಾರಿಯಾ (ಜಾವೆಲಿನ್) ರಿಂಕು (ಜಾವೆಲಿನ್), ನರೇಂದರ್ ರಣಬೀರ್ (ಜಾವೆಲಿನ್), ಸಂದೀಪ್ (ಜಾವೆಲಿನ್), ಅಮಿತ್ ಕುಮಾರ್ ಸರೋಹ (ಕ್ಲಬ್ ಥ್ರೋ), ದೀಪಾ ಮಲಿಕ್ (ಶಾಟ್‌ಪಟ್), ಧರ್ಮವೀರ (ಕ್ಲಬ್ ಥ್ರೋ) , ಅಂಕುರ್ ಧಾಮಾ (1,500ಮೀ ಓಟ) ಫರ್ಮಾನ್ ಬಾಷಾ ( ಪವರ್ ಲಿಫ್ಟರ್) ಸುಯಾಷ್ ನಾರಾಯಣ್ ಜಾಧವ್ ( ಈಜು).