ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಶೂಟರ್ ಮನು ಭಾಕರ್ ಕಳೆದ ಬಾರಿಯೇ ಪದಕ ಗೆಲ್ಲಬೇಕಿತ್ತು. ಆದರೆ ಪಿಸ್ತೂಲ್ ಸಮಸ್ಯೆಯಿಂದ ಕೊನೆಯ ಹಂತದಲ್ಲಿ ಕೈ ತಪ್ಪಿ ಹೋಗಿತ್ತು. ಆದರೆ ಈ ಬಾರಿ ಹಾಗಾಗಲು ಅವರು ಬಿಡಲಿಲ್ಲ.
ದೇಶಕ್ಕೆ ಹೆಮ್ಮೆಯ ಕ್ರೀಡಾಪಟುಗಳನ್ನು ನೀಡಿದ ಹರ್ಯಾಣದಿಂದ ಬಂದವರು ಮನು ಭಾಕರ್. 10 ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆ ಈ ಬಾರಿ ಕಂಚಿನ ಪದಕ ಗೆದ್ದು ಕೊಡುವ ಮೂಲಕ ಒಲಿಂಪಿಕ್ಸ್ ಆರಂಭವಾದ ಎರಡನೇ ದಿನಕ್ಕೇ ಪದಕದ ಖಾತೆ ತೆರೆಯುವಂತೆ ಮಾಡಿದ್ದಾರೆ.
ಕೇವಲ ಶೂಟಿಂಗ್ ಮಾತ್ರವಲ್ಲ, ಸ್ಕೇಟಿಂಗ್, ಬಾಕ್ಸಿಂಗ್ ನಲ್ಲೂ ಮನು ಭಾಕರ್ ಗೆ ಆಸಕ್ತಿಯಿತ್ತು. ಥಾನ್ ತಾ ಎಂಬ ಸಮರ ಕಲೆಯಲ್ಲೂ ಪ್ರವೀಣೆ. 14 ನೇ ವಯಸ್ಸಿನಿಂದ ಶೂಟಿಂಗ್ ನಲ್ಲಿ ತರಬೇತಿ ಆರಂಭಿಸಿದ್ದರು. 2017 ರಲ್ಲಿ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹೀನಾ ಸಿಧು ಸೋಲಿಸಿದ್ದರು.
ಕಳೆದ ಬಾರಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮನು ಭಾಕರ್ ಪಿಸ್ತೂಲ್ ಸ್ಪರ್ಧಾ ಸುತ್ತಿನಲ್ಲೇ ಕೈಕೊಟ್ಟಿತು. ಇದರಿಂದಾಗಿ ಪದಕ ಸುತ್ತಿನಲ್ಲಿ ಭಾಗವಹಿಸಲಾಗದೇ ನಿರಾಶೆ ಅನುಭವಿಸಿದರು. ಪಿಸ್ತೂಲ್ ಸರಿಪಡಿಸುವಷ್ಟರಲ್ಲಿ ಅವರ ಅಮೂಲ್ಯ 20 ನಿಮಿಷ ಕಳೆದುಹೋಗಿತ್ತು. ಆದರೆ ಅಂದು ಅನುಭವಿಸಿದ ನಿರಾಸೆಗೆ ಇಂದು ಪದಕ ಗೆಲ್ಲುವ ಮೂಲಕ ನೋವು ಮರೆಸಿದ್ದಾರೆ.