ವಿಶ್ವದ ನಾಲ್ಕನೇ ನಂಬರ್ ಟೆನ್ನಿಸ್ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ಮಂಗಳವಾರ ಬೆನ್ನುನೋವಿನಿಂದಾಗಿ ರಿಯೋ ಒಲಿಂಪಿಕ್ಸ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಅತೀ ಪ್ರಮುಖ ಆಟಗಾರರು ರಿಯೋದಲ್ಲಿ ಆಡಲು ವಿವಿಧ ಕಾರಣಗಳಿಂದ ನಿರಾಕರಿಸಿರುವ ನಡುವೆ ವಾವ್ರಿಂಕಾ ಆಡದಿರುವುದು ರಿಯೋ ಟೆನ್ನಿಸ್ ಪಂದ್ಯಾವಳಿಗೆ ಇನ್ನೊಂದು ಪೆಟ್ಟು ಬಿದ್ದಹಾಗಾಗಿದೆ.
ರೋಜರ್ ಫೆಡರರ್ ಮತ್ತು ಬೆಲಿಂಡಾ ಬೆನ್ಸಿಕ್ ಗಾಯದಿಂದಾಗಿ ಆಡದೇ ಹಿಂದೆಸರಿದ ಬಳಿಕ 31 ವರ್ಷದ ವಾರ್ವಿಂಕಾ ಮೂರನೇ ಸ್ವಿಸ್ ಆಟಗಾರರಾಗಿದ್ದಾರೆ. ನನಗೆ ತೀರಾ ದುಃಖವಾಗಿದೆ ಎಂದು ಮಾಜಿ ಫ್ರೆಂಚ್ ಮತ್ತು ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ತಿಳಿಸಿದರು.
ರಿಯೋಗೆ ಹೋಗುವುದು ನನ್ನ ಹೆಬ್ಬಯಕೆಯಾಗಿತ್ತು. ಬೀಜಿಂಗ್ ಮತ್ತು ಲಂಡನ್ ಬಳಿಕ ಬ್ರೆಜಿಲ್‌ನಲ್ಲಿ ನನ್ನ ಆಟಕ್ಕೆ ಜೀವ ತುಂಬಲು ಬಯಸಿದ್ದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ರಿಯೋಗೆ ತೆರಳುತ್ತಿರುವ ಎಲ್ಲಾ ಸ್ವಿಸ್ ಅಥ್ಲೀಟ್‌ಗಳಿಗೆ ದೂರದಿಂದಲೇ ನಾನು ಬೆಂಬಲಿಸುತ್ತೇನೆ ಎಂದು ವಾರ್ವಿಂಕಾ ಹೇಳಿದರು.
ವಾರ್ವಿಂಕಾ ಕಳೆದ ವಾರ ಟೊರಂಟೊದಲ್ಲಿದ್ದಾಗ ಅವರ ಬೆನ್ನುನೋವು ಉಲ್ಬಣಿಸಿತು. 2008ರ ಕ್ರೀಡಾಕೂಟದಲ್ಲಿ ಅವರು ಫೆಡರರ್ ಜತೆ ಡಬಲ್ಸ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತರಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ