ಹೈದರಾಬಾದ್: ಭಾರತ ಕಂಡ ಶ್ರೇಷ್ಠ ಬ್ಯಾಡ್ಮಿಂಟನ್ ತಾರೆಗಳಲ್ಲಿ ಒಬ್ಬರಾಗಿರುವ ಪಿವಿ ಸಿಂಧು ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರು ಮದುವೆಯಾಗಲಿರುವ ಹುಡುಗ ಯಾರು, ಯಾವಾಗ ಮದುವೆ ಇಲ್ಲಿದೆ ವಿವರ.
ಪಿವಿ ಸಿಂಧು ಹೈದರಾಬಾದ್ ಮೂಲದ ವೆಂಕಟ ದತ್ತ ಸಾಯಿ ಎಂಬವರ ಜೊತೆ ವಿವಾಹವಾಗಲಿದ್ದಾರೆ. ಡಿಸೆಂಬರ್ 22 ರಂದು ಇಬ್ಬರೂ ಮದುವೆಯಾಗುತ್ತಿದ್ದಾರೆ. ಉದಯಪುರದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಮೊನ್ನೆಯಷ್ಟೇ ಸಿಂಧು ಸೈಯದ್ ಮೋದಿ ಅಂತಾರಾಷ್ಟ್ರೀಯ ಟೂರ್ನಿ ಟೈಟಲ್ ಗೆದ್ದ ಬೆನ್ನಲ್ಲೇ ಈ ಘೋಷಣೆ ಮಾಡಿದ್ದಾರೆ.
ಡಿಸೆಂಬರ್ 20 ರಿಂದಲೇ ಮದುವೆ ಕಾರ್ಯಕ್ರಮಗಳು ನಡೆಯಲಿವೆ. ಡಿಸೆಂಬರ್ 24 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ. ವೆಂಕಟದತ್ತ ಸಾಯಿ ಪೊಸಿಡೆಕ್ಸ್ ಟೆಕ್ನಾಲಜೀಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಎರಡೂ ಕುಟುಂಬಗಳೂ ಮೊದಲಿನಿಂದಲೂ ಪರಿಚಿತರು ಎನ್ನಲಾಗಿದೆ.
ತೀರಾ ಎರಡು ತಿಂಗಳ ಹಿಂದಷ್ಟೇ ಮದುವೆ ಮಾತುಕತೆ ನಡೆದಿದ್ದು, ಎಲ್ಲವೂ ಅಂತಿಮವಾಗಿದೆ ಎಂದು ತಿಳಿದುಬಂದಿದೆ. ವಿಶೇಷವೆಂದರೆ ವೆಂಕಟದತ್ತ ಸಾಯಿ ಸ್ನಾತಕೋತ್ತರ ಪದವಿ ಪಡೆದಿರುವುದು ಬೆಂಗಳೂರಿನಲ್ಲಿ. ಬೆಂಗಳೂರಿನ ಐಐಟಿಯಲ್ಲಿ ಡಾಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದಲ್ಲಿ ಉನ್ನತ ಪದವಿ ಪಡೆದಿದ್ದರು. ಇದೀಗ ಸಿಂಧು ಜೊತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ.