ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಈ ಬಾರಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಅಮನ್ ಸೆಹ್ರಾವತ್ ಗೆ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಗುರು. ಮೊದಲ ಒಲಿಂಪಿಕ್ಸ್ ನಲ್ಲೇ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಅಮನ್ ಗುರುವಿಗೆ ತಕ್ಕ ಶಿಷ್ಯನೆನಿಸಿಕೊಂಡಿದ್ದಾರೆ.
21 ವರ್ಷದ ಅಮನ್ 57 ಕೆಜಿ ವಿಭಾಗದ ಕುಸ್ತಿಯಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಅತೀ ಕಿರಿಯ ವಯಸ್ಸಿನಲ್ಲಿ ಪದಕ ಗೆದ್ದ ದಾಖಲೆ ಮಾಡಿದ್ದಾರೆ. ಇದು ಅವರ ಮೊದಲ ಒಲಿಂಪಿಕ್ಸ್ ಎನ್ನುವುದು ಇನ್ನೊಂದು ವಿಶೇಷ. ಕುಸ್ತಿಪಟುಗಳ ತವರು ಹರ್ಯಾಣದಿಂದ ಬಂದವರು ಅಮನ್.
ಅಮನ್ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ತಮ್ಮ ಗುರು ಎಂದು ಪರಿಗಣಿಸಿದ್ದಾರೆ. ಅವರ ಸ್ಪೂರ್ತಿಯಿಂದಲೇ ಕುಸ್ತಿ ಅಖಾಡಕ್ಕಿಳಿದವರು. ಭಾರತಕ್ಕೆ ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟಿದ್ದ ಸುಶೀಲ್ ಕುಮಾರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದವರು.
ಚಿಕ್ಕಂದಿನಲ್ಲೇ ಅಮನ್ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ. ಆದರೆ ಚಿಕ್ಕಂದಿನಲ್ಲೇ ತಮ್ಮ ಮಗ ಕುಸ್ತಿಪಟುವಾಗಬೇಕು ಎಂಬುದು ಅವರ ತಂದೆ-ತಾಯಿಯ ಕನಸಾಗಿತ್ತಂತೆ. ಇಂದು ಪದಕ ಗೆಲ್ಲುವ ಮೂಲಕ ತಂದೆ-ತಾಯಿಯ ಕನಸನ್ನೂ ನನಸು ಮಾಡಿದ್ದಾರೆ. ಭಾರತಕ್ಕೆ ಘಟಾನುಘಟಿ ಕುಸ್ತಿಪಟುಗಳನ್ನು ನೀಡಿದ ಛತ್ರಶಾಲಾ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಾ ಬಂದ ಅಮನ್ ತಾವೂ ಕೂಡಾ ಕುಸ್ತಿ ಅಖಾಡದ ಹೆಸರು ಮತ್ತಷ್ಟು ಹೆಚ್ಚಿಸಿದ್ದಾರೆ.