Select Your Language

Notifications

webdunia
webdunia
webdunia
webdunia

ನೋಡ ಬನ್ನಿ ನಮ್ಮೂರಾ ಮೈಸೂರು ದಸರಾ.. ಅದೇನು ಅಂದ ಅದೇನು ಚಂದಾ...

ನೋಡ ಬನ್ನಿ ನಮ್ಮೂರಾ ಮೈಸೂರು ದಸರಾ.. ಅದೇನು ಅಂದ ಅದೇನು ಚಂದಾ...
, ಗುರುವಾರ, 29 ಸೆಪ್ಟಂಬರ್ 2016 (12:51 IST)
ದಸರಾ ಎಂದಾಕ್ಷಣ ವಿದ್ಯುತ್ ಅಲಂಕೃತ ಭವ್ಯ ಅರಮನೆ.... ಮಹಾರಾಜರ ಖಾಸಗಿ ದರ್ಬಾರ್.... ಚಿನ್ನದ ಅಂಬಾರಿ ಹೊತ್ತ ಗಜಪಡೆಯ ಗಾಂಭೀರ್ಯದ ನಡಿಗೆಯ ಜಂಬೂ ಸವಾರಿ.... ಪಂಜಿನ ಕವಾಯತು.... ಹೀಗೆ ಒಂದೇ ಎರಡೇ... ಗತಕಾಲದ ರಾಜವೈಭವ ನಮ್ಮ ಕಣ್ಮುಂದೆ ಹಾದು ಹೋಗುತ್ತದೆ.
ಇತಿಹಾಸವೇ ಇದೆ 

ಮೈಸೂರಿನ ದಸರಾ ಇತರೆಡೆಯಲ್ಲಿ ಆಚರಿಸುವ ದಸರಾಕ್ಕಿಂತ ವಿಭಿನ್ನ, ವಿಶಿಷ್ಟ ಹೀಗಾಗಿ ವಿಶ್ವವಿಖ್ಯಾತಿ ಗಳಿಸಿದೆ. ಹಾಗೆ ನೋಡಿದರೆ ಮೈಸೂರು ದಸರಾ ಆಚರಣೆ ಇಂದು ನಿನ್ನೆಯದಲ್ಲ. ಇದಕ್ಕೆ ಗತ ಇತಿಹಾಸವೇ ಇದೆ.
 
ದಸರಾ ಅರ್ಥಾತ್ ವಿಜಯದಶಮಿ - ಇದು ದುಷ್ಟಶಕ್ತಿಯನ್ನು ನಿಗ್ರಹಿಸಿ ವಿಜಯಪಡೆದ ಸಂಕೇತವೂ ಹೌದು. ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರಂತೆ. ಆದರೆ ಅವರ ಸಾಮ್ರಾಜ್ಯ ಪತನಗೊಂಡ ಬಳಿಕ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಮೈಸೂರಿನ ಯದುವಂಶಸ್ಥರು ಇದನ್ನು ಮುಂದುವರಿಸಿಕೊಂಡು ಬಂದರು ಎಂದು ಇತಿಹಾಸ ಹೇಳುತ್ತದೆ.
 
ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದ ರಾಜ ಒಡೆಯರ್ 1610ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸಿದರು. ಆ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದ್ದಲ್ಲದೆ, ಮೈಸೂರಿನಲ್ಲಿ ದಸರಾ ಆಚರಣೆಯನ್ನು ಮುಂದುವರಿಸಿದರು. ನಂತರದ ಕಾಲಾವಧಿಯಲ್ಲಿ ಇದು ತನ್ನದೇ ಆದ ವೈಭವ ಪಡೆಯುವುದರೊಂದಿಗೆ ವಿಶ್ವವಿಖ್ಯಾತ ಪಡೆದಿದ್ದು ಇತಿಹಾಸ.
 
ವೈಶಿಷ್ಟ್ಯವಿದು ಆಚರಣೆ 
ಮೈಸೂರು ದಸರಾ ಸಂದರ್ಭ ನಡೆಯುವ ಆಚರಣೆಗಳಲ್ಲಿಯೂ ಹತ್ತು ಹಲವು ವೈಶಿಷ್ಟ್ಯಗಳು ಇರುವುದನ್ನು ನಾವು ಕಾಣಬಹುದು. ನವರಾತ್ರಿ ಆರಂಭದ ಒಂಭತ್ತು ದಿನಗಳ ಕಾಲ ಅಂದರೆ ಪಾಡ್ಯದಿಂದ ಬಿದಿಗೆ, ತದಿಗೆ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಹೀಗೆ ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ಚಾಮುಂಡಿಬೆಟ್ಟ ಹಾಗೂ ಅಂಬಾವಿಲಾಸ ಅರಮನೆಯಲ್ಲಿ ನಡೆದರೆ, ಆ ನಂತರ ವಿಜಯದಶಮಿಯಂದು ಜಂಬೂ ಸವಾರಿಯೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಮುಗಿದು ಬಿಡುತ್ತದೆ.
 
ಮನರಂಜನಾ ಕಲೆಗಳ ಉತ್ಸವ 
ಆದರೆ ಈ ಹತ್ತು ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಿವೆಯಲ್ಲ, ಅವು ದಸರಾಕ್ಕೆ ಮೆರುಗು ನೀಡುತ್ತವೆ.
ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿ ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುತ್ತದೆ. ಬಳಿಕ ಪ್ರತಿದಿನವೂ ದಸರಾ ಸಂಗೀತೋತ್ಸವ, ದಸರಾ ನಾಟಕೋತ್ಸವ, ದಸರಾ ಜನಪದೋತ್ಸವ, ದಸರಾ ಕವಿಗೋಷ್ಠಿ, ದಸರಾ ಚಲನಚಿತ್ರೋತ್ಸವ, ದಸರಾ ಫಲಪುಷ್ಪ ಪ್ರದರ್ಶನ, ದಸರಾ ಕುಸ್ತಿ ಪ್ರದರ್ಶನ, ಬೊಂಬೆ ಪ್ರದರ್ಶನ, ದಸರಾ ಆಹಾರ ಮೇಳ, ಯುವದಸರಾ, ಹೀಗೆ ವಿವಿಧ ಕಾರ್ಯಕ್ರಮಗಳು ನಡೆದರೆ, ದಸರಾ ಪ್ರಯುಕ್ತ ಕೆಲವು ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ನಡೆಸುತ್ತವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ