Select Your Language

Notifications

webdunia
webdunia
webdunia
webdunia

ಜನ್ಮಾಷ್ಟಮಿ ವಿಶೇಷ: ಕೃಷ್ಣನೊಂದಿಗೆ ಬೆಸುಗೆ ಹೊಂದಿರುವ ಪುಣ್ಯ ಸ್ಥಳಗಳ ಪರಿಚಯ

ಜನ್ಮಾಷ್ಟಮಿ ವಿಶೇಷ: ಕೃಷ್ಣನೊಂದಿಗೆ ಬೆಸುಗೆ ಹೊಂದಿರುವ ಪುಣ್ಯ ಸ್ಥಳಗಳ ಪರಿಚಯ
, ಬುಧವಾರ, 24 ಆಗಸ್ಟ್ 2016 (14:16 IST)
ಹಿಂದೂ ದೇವತೆಗಳಲ್ಲಿ ಕೃಷ್ಣನಿಗೆ ವಿಶಿಷ್ಟ ಸ್ಥಾನ. ಲೀಲಾಮಯಿ ಕೃಷ್ಣನದು ಸರ್ವರೂ ಇಷ್ಟಪಡುವ ಸರ್ವೋತ್ತಮ ವ್ಯಕ್ತಿತ್ವ. ಆತ ಧರೆಗೆ ಅವತರಿಸಿದ ಪುಣ್ಯದಿನದಂದು ಹಿಂದೂಗಳು ಶ್ರದ್ಧಾಪೂರ್ವಕವಾಗಿ ಕೃಷ್ಣಾಷ್ಟಮಿಯನ್ನು ಆಚರಿಸುತ್ತಾರೆ. ಈ ಬಾರಿ ಆಗಸ್ಟ್ 25ರಂದು ಬಂದಿದೆ ಕೃಷ್ಣ ಜಯಂತಿ.

ಕೃಷ್ಣನನ್ನು ಸ್ವಾಗತಿಸಿ, ವಿವಿಧ ಭಕ್ಷ್ಯಗಳನ್ನು ಆತನಿಗೆ ಸಮರ್ಪಿಸುವ ಮುನ್ನ ಆತನ ಜತೆಗೆ ಆಳವಾದ ಸಂಬಂಧವನ್ನು ಹೊಂದಿರುವ ಕೆಲ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ.
 
ಮಥುರಾ: ಇದು ಪರಮಾತ್ಮ ಕೃಷ್ಣ ಹುಟ್ಟಿದ ಸ್ಥಳ.  ಕೃಷ್ಣನ ತಂದೆ-ತಾಯಿಗಳಾದ ವಸುದೇವ ಮತ್ತು ದೇವಕಿಯ ಮದುವೆಯ ದಿನ ಆಕಾಶವಾಣಿಯೊಂದು ನಿನ್ನ ತಂಗಿಯ ಮಗನಿಂದಲೇ ನಿನಗೆ ಸಾವು ಸಂಭವಿಸಲಿದೆ ಎಂದು ಆತನ ಮಾವ, ಮಥುರಾದ ಅರಸ ಕಂಸನನ್ನುದ್ದೇಶಿಸಿ ಭವಿಷ್ಯವನ್ನು ನುಡಿದಿತ್ತು. ಇದರಿಂದ ಭಯಗೊಂಡ ಆತ ತಂಗಿ ಮತ್ತು ಭಾವನನ್ನು ಸೆರೆಮನೆಯೊಳಗಿಟ್ಟು ಅವರಿಗೆ ಜನಿಸಿದ ಮಕ್ಕಳನ್ನು ಒಂದರ ಹಿಂದೆ ಒಂದರಂತೆ ಕೊಲ್ಲುತ್ತಿದ್ದ. ಮಥುರಾದ ಈ ಸೆರೆಮನೆಯಲ್ಲಿಯೇ ವಸುದೇವ- ದೇವಕಿಯರ  8ನೇ ಮಗುವಾಗಿ ಕೃಷ್ಣ ಹುಟ್ಟಿದ. 
 
ಗೋಕುಲ: ದೈವ ಸಂಕಲ್ಪದಂತೆ ಕೃಷ್ಣನ ತಂದೆ ವಸುದೇವನಿಗೆ ಕಟ್ಟಿದ್ದ ಎಲ್ಲ ಕಬ್ಬಿಣದ ಸಂಕೋಲೆಗಳು ಮುರಿದು ಹೋಗಿ, ಸೆರೆಮನೆ ದ್ವಾರ ತೆರೆಯಿತು. ಮಗುವನ್ನು ಬುಟ್ಟಿಯಲ್ಲಿಟ್ಟು ತಲೆಯ ಮೇಲೆ ಹೊತ್ತು ಸಾಗಿದ ಆತನಿಗೆ ಯಮುನಾ ನದಿಯೂ ದಾರಿ ಬಿಟ್ಟುಕೊಟ್ಟಿತು. ಗೋಕುಲದಲ್ಲಿದ್ದ ನಂದ ಎಂಬ ಗೋಪಾಲಕನ ನಿವಾಸಕ್ಕೆ ಹೋದ ವಸುದೇವ ನವಜಾತ ಕೃಷ್ಣನನ್ನು ನಂದನ ಪತ್ನಿ ಯಶೋಧೆಯ ಮಡಿಲಲ್ಲಿಟ್ಟು, ಆಕೆಗೆ ಆಗ ತಾನೇ ಜನಿಸಿದ ಹೆಣ್ಣುಮಗುವನ್ನು ಎತ್ತಿಕೊಂಡು ಮರಳಿದ. ಇಲ್ಲಿಯೇ ಕೃಷ್ಣ ತನ್ನ ಬಾಲ ಲೀಲಿಗಳನ್ನು ತೋರಿಸಿದ್ದು. 
 
ವೃಂದಾವನ: ಗೋಪಾಲಕ ಗುಂಪಿನ ನಾಯಕನಾಗಿದ್ದ ನಂದನ ಮನೆಯಲ್ಲಿ ಕೃಷ್ಣ ತನ್ನ ಬಾಲ್ಯವನ್ನು ಕಳೆದ. ಗೋವುಗಳನ್ನು ಮೇಯಿಸುತ್ತ, ತನ್ನ ಸ್ನೇಹಿತರ ಜತೆ ಆಟವಾಡುತ್ತ ಬೆಳೆಯತೊಡಗಿದ. ಕೃಷ್ಣ ತನ್ನ ಕಿರು ಬೆರಳಲ್ಲಿ ಎತ್ತಿದ ಗೋವರ್ಧನ ಪರ್ವತ ಇರುವುದು ಈ ವೃಂದಾವನದ ಹತ್ತಿರವೇ. ಇಂದಿಗೂ ನಾವು ಈ ಪರ್ವತದ ಅವಶೇಷಗಳನ್ನು ನೋಡಬಹುದು. 
 
ದ್ವಾರಕಾ: ಕ್ರೂರಿ ಮಾವ ಕಂಸನನ್ನು ಸಂಹರಿಸಿದ ಬಳಿಕ ಕೃಷ್ಣ ತನ್ನ ಬಂಧುಬಾಂಧವರಾದ ಯಾದವರೊಂದಿಗೆ ದ್ವಾರಕೆಗೆ ತೆರಳಿ ಸಾಮ್ರಾಜ್ಯ ಕಟ್ಟಿಕೊಂಡು ಆಳಿದ.
 
ಕುರುಕ್ಷೇತ್ರ: ಅರ್ಜುನನ ಸಾರಥಿಯಾಗಿ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಂಡು ಪಾರ್ಥಸಾರಥಿ ಎನ್ನಿಸಿಕೊಂಡ ಕೃಷ್ಣ ಇಲ್ಲಿಯೇ ಮಾನವ ಕುಲಕ್ಕೆ  'ಭಗವದ್ಗೀತೆ' ಎಂಬ ದಿವ್ಯ ಉಪದೇಶಾಮೃತವನ್ನು ಉಡುಗೊರೆಯಾಗಿ ನೀಡಿದ. 
 
ವೇರಾವಲ್/ಸೋಮನಾಥ್: ಪವಿತ್ರ ನಗರ ಸೋಮನಾಥದ ಬಳಿಯ ವೇರಾವಲ್ ಹತ್ತಿರವಿರುವ ಪ್ರಭಾಸ್ ಕ್ಷೇತ್ರದಲ್ಲಿ ಬಳಿ ಭಾಲ್ಕಾ ತೀರ್ಥವಿದೆ. ಈ ಪ್ರದೇಶದಲ್ಲಿಯೇ ಬೇಟೆಗಾರನೊಬ್ಬ ಪ್ರಯೋಗಿಸಿದ ಬಾಣ ಕೃಷ್ಣನ ಎಡ ಕಾಲಿಗೆ ತಗುಲಿತು. ಅಲ್ಲಿಯೇ ಕೃಷ್ಣ ತನ್ನ ದೇಹವನ್ನು ತ್ಯಜಿಸಿ ವೈಕುಂಠಕ್ಕೆ ಮರಳಿದ. 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗವಿಗಂಗಾಧರೇಶ್ವರ: ಪ್ರಾಚೀನ ಶಿಲ್ಪಿಗಳ ವಾಸ್ತುಶಾಸ್ತ್ರ ಜ್ಞಾನಕ್ಕೆ ನಿದರ್ಶನ