Select Your Language

Notifications

webdunia
webdunia
webdunia
webdunia

ಸ್ವಾದಿಷ್ಠವಾದ ರವಾ ಕಚೋರಿ

ಸ್ವಾದಿಷ್ಠವಾದ ರವಾ ಕಚೋರಿ
ಬೆಂಗಳೂರು , ಬುಧವಾರ, 13 ಮಾರ್ಚ್ 2019 (15:23 IST)
ಸಂಜೆಯ ಸಮಯದಲ್ಲಿ ಟೀ ಜೊತೆಗೆ ತಿಂಡಿಯನ್ನು ತಿನ್ನುವ ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ದಿನವೂ ಒಂದೇ ತರಹದ ತಿಂಡಿಗಳನ್ನು ತಿಂದು ಬೇಜಾರಾಗಿದ್ದರೆ ನೀವು ಈ ರವೆಯ ಕಚೋರಿಯನ್ನು ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ನೀವು ತರಕಾರಿಗಳನ್ನೂ ಹೆಚ್ಚಾಗಿ ಬಳಸಿಕೊಳ್ಳುವುದರಿಂದ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದಾಗಿದೆ.
ಬೇಕಾಗುವ ಸಾಮಗ್ರಿಗಳು:
ರವೆ - 1 ಕಪ್
ಓಮಕಾಳು - 1 ಟಿ ಚಮಚ
ಎಣ್ಣೆ - ಸ್ವಲ್ಪ
ಉಪ್ಪು - ರುಚಿಗೆ
ಜೀರಿಗೆ - 1 ಟಿ ಚಮಚ
ಈರುಳ್ಳಿ - 1 (ಚಿಕ್ಕದು)
ಶುಂಠಿ - 1 ಇಂಚು
ಟೊಮೆಟೋ - 1/2
ಹಸಿಮೆಣಸು - 1
ಕ್ಯಾಪ್ಸಿಕಂ - 1/2
ಹಸಿಬಟಾಣಿ - 1/4 ಕಪ್
ಕ್ಯಾರಟ್ - 1/2
ಬೇಯಿಸಿದ ಬಟಾಟೆ - 1
ಅಚ್ಚಖಾರದ ಪುಡಿ - 1/2 ಚಮಚ
ಅರಿಶಿಣ - 1/2 ಚಮಚ
ಗರಂಮಸಾಲಾ - 1/2 ಚಮಚ
ಚಾಟ್ ಮಸಾಲಾ - 1/2 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಜೋಳದ ಹಿಟ್ಟು - ಸ್ವಲ್ಪ
 
ಮಾಡುವ ವಿಧಾನ:
 
ಈರುಳ್ಳಿ, ಶುಂಠಿ, ಕ್ಯಾಪ್ಸಿಕಂ, ಹಸಿಮೆಣಸು, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಟೊಮೆಟೋ ಎಲ್ಲವನ್ನೂ ಚಿಕ್ಕದಾಗಿ ಹೆಚ್ಚಿರಿಸಿಕೊಳ್ಳಿ. ಒಂದು ಪ್ಯಾನ್‌ನಲ್ಲಿ 3 ಕಪ್ ನೀರನ್ನು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಓಮಕಾಳು, 2 ಟೀ ಚಮಚ ಎಣ್ಣೆಯನ್ನು ಹಾಕಿ ಕುದಿಸಿ. ನಂತರ 1 ರಿಂದ 11/4 ಕಪ್ ಹುರಿದ ರವೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರವೆ ಚೆನ್ನಾಗಿ ಬೆಂದು ನೀರು ಆರಿದ ನಂತರ ಪ್ಯಾನ್ ಅನ್ನು ಬದಿಯಲ್ಲಿರಿಸಿ. ಈಗ ಇನ್ನೊಂದು ಪ್ಯಾನ್ ಅನ್ನು ತೆಗೆದುಕೊಂಡು ಸ್ಟೌ ಮೇಲಿಟ್ಟು 2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ 1 ಚಮಚ ಜೀರಿಗೆ, ಹೆಚ್ಚಿದ ಈರುಳ್ಳಿ ಮತ್ತು ಶುಂಠಿಯನ್ನು ಹಾಕಿ ಹುರಿಯಿರಿ. ಒಂದು ನಿಮಿಷದ ನಂತರ ಎಲ್ಲಾ ಹೆಚ್ಚಿದ ತರಕಾರಿಗಳನ್ನು ಮತ್ತು ಬಟಾಣಿಯನ್ನು ಹಾಕಿ ಹುರಿಯಿರಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ 2-3 ನಿಮಿಷ ಮುಚ್ಚಿ ಬೇಯಿಸಿ. ನಂತರ ಅದಕ್ಕೆ ಅಚ್ಚಖಾರದ ಪುಡಿ, ಅರಿಶಿಣ, ಗರಂಮಸಾಲಾ , ಚಾಟ್ ಮಸಾಲಾವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಬೇಯಿಸಿ ಸ್ಮ್ಯಾಶ್ ಮಾಡಿದ ಬಟಾಟೆ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟೌ ಆಫ್ ಮಾಡಿ.
 
ಈಗಾಗಲೇ ಸಿದ್ದಮಾಡಿಟ್ಟುಕೊಂಡಿರುವ ರವೆಯ ಮಿಶ್ರಣದ ಉಂಡೆಯನ್ನು ಮಾಡಿಕೊಂಡು ಅದರಲ್ಲಿ ನಂತರ ತಯಾರಿಸಿಕೊಂಡ ಮಸಾಲೆಯನ್ನು ಹೂರಣದಂತೆ ತುಂಬಿ ಸ್ವಲ್ಪ ತಟ್ಟಿಕೊಳ್ಳಿ. ನಂತರ ಅದನ್ನು ಜೋಳದ ಹಿಟ್ಟಿನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಕರಿದರೆ ರವೆಯ ಕಚೋರಿ ಸವಿಯಲು ಸಿದ್ಧವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲೇ ಮಾಡಿ ಸವಿಯಿರಿ ಬಾದಾಮ್ ಪಿಸ್ತಾ ಕುಲ್ಫಿ..