Select Your Language

Notifications

webdunia
webdunia
webdunia
webdunia

ಕಣಲೆ ಪಲ್ಯವನ್ನು ವರ್ಷಕ್ಕೆ ಒಮ್ಮೆಯಾದರೂ ತಿನ್ನಿ...!!

ಕಣಲೆ ಪಲ್ಯವನ್ನು ವರ್ಷಕ್ಕೆ ಒಮ್ಮೆಯಾದರೂ ತಿನ್ನಿ...!!

ನಾಗಶ್ರೀ ಭಟ್

ಬೆಂಗಳೂರು , ಮಂಗಳವಾರ, 9 ಜನವರಿ 2018 (18:56 IST)
ಕರ್ನಾಟಕದ ಕೆಲವು ಭಾಗಗಳಲ್ಲಿ ಕಣಲೆಯನ್ನು(ಬಿದಿರಿನ ಮೊಳಕೆ)ಬಳಸಿ ಪಲ್ಯವನ್ನು ಮಾಡುವುದು ಕಾಣಸಿಗುತ್ತದೆ. ಜೂನ್ ಮತ್ತು ಜುಲೈ ತಿಂಗಳ ಸಮಯದಲ್ಲಿ ಬಿದುರು ಮೊಳಕೆಯೊಡೆಯುತ್ತದೆ. ಆದ್ದರಿಂದ ಈ ಸಮಯದಲ್ಲಿ ಕಣಲೆ ಹೆಚ್ಚಾಗಿ ದೊರೆಯುತ್ತದೆ.

ಚಿಕ್ಕದಾಗಿ ಹೆಚ್ಚಿದ ಕಣಲೆಯನ್ನು ಉಪ್ಪಿನಲ್ಲಿ ನೆನೆಹಾಕಿಟ್ಟುಕೊಂಡು ವರ್ಷಪೂರ್ತಿ ಬಳಸಬಹುದು. ಕಣಲೆಯನ್ನು ಬಳಸಿ ಉಪ್ಪಿನಕಾಯಿ, ಪಲ್ಯ, ಸಾಂಬಾರು, ಈ ಕಣಲೆಯ ಪಲ್ಯವನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಈ ಲೇಖನವನ್ನು ಓದಿ.
 
ಬೇಕಾಗುವ ಸಾಮಗ್ರಿಗಳು:
 
ಚಿಕ್ಕದಾಗಿ ಹೆಚ್ಚಿರುವ ಕಣಲೆ - 2 ಕಪ್
ಕಾಬೂಲ್ ಕಡಲೆ - 1/2 ಕಪ್
ಹಸಿಮೆಣಸು - 2
ಕರಿಬೇವು - ಸ್ವಲ್ಪ
ಅರಿಶಿಣ - 1 ಚಮಚ
ಅಚ್ಚಖಾರದ ಪುಡಿ - 1 ಚಮಚ
ಸಾಸಿವೆ - 3 ಚಮಚ
ಉದ್ದಿನಬೇಳೆ - 2 ಚಮಚ
ಕಾಯಿತುರಿ - 1 ಕಪ್
ಒಣಮೆಣಸು - 7-8
ಜೀರಿಗೆ - 1 ಚಮಚ
ದನಿಯಾ - 2-3 ಚಮಚ
ಇಂಗು - 1/2 ಚಮಚ
ಎಣ್ಣೆ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
 
ಕಣಲೆಯನ್ನು 2-3 ದಿನ ಮೊದಲೇ ಚಿಕ್ಕದಾಗಿ ಹೆಚ್ಚಿ ನೀರಿನಲ್ಲಿ ನೆನೆಸಿಡಿ ಮತ್ತು ಅದರ ನೀರನ್ನು ದಿನವೂ ಬದಲಾಯಿಸಿ. ನಂತರ ಕಣಲೆಯನ್ನು ಸೋಸಿ ನೀರನ್ನು ಬೇರ್ಪಡಿಸಿಕೊಳ್ಳಿ. ಈಗ ಕುಕ್ಕರ್‌ನಲ್ಲಿ ಹಿಂದಿನ ದಿನವೇ ನೆನೆಸಿಟ್ಟ ಕಡಲೆ, ಕಣಲೆಕಾಳಿಗೆ ರುಚಿಗೆತಕ್ಕಷ್ಟು ಉಪ್ಪು, ಅಚ್ಚಖಾರದ ಪುಡಿ ಮತ್ತು ಬೇಯಲು ಅಗತ್ಯವಿರುವಷ್ಟು ನೀರನ್ನು ಹಾಕಿ 1-2 ಸೀಟಿಯಾದ ಮೇಲೆ ತೆಗೆದಿಟ್ಟುಕೊಳ್ಳಿ. ಹಸಿಮೆಣಸನ್ನು ಹೆಚ್ಚಿಡಿ.
 
ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ 1 ಚಮಚ ಸಾಸಿವೆ, ಒಣಮೆಣಸು, ದನಿಯಾ ಮತ್ತು ಜೀರಿಗೆಯನ್ನು ಕ್ರಮವಾಗಿ ಹಾಕಿ ಕಡಿಮೆ ಉರಿಯಲ್ಲಿ ಅದರ ಪರಿಮಳ ಬರುವವರೆಗೂ ಚೆನ್ನಾಗಿ ಹುರಿದು ಕೊನೆಯಲ್ಲಿ ಇಂಗನ್ನು ಸೇರಿಸಿ ಅದರೊಂದಿಗೆ ಕಾಯಿತುರಿ ಮತ್ತು ಸ್ವಲ್ಪವೇ ಸ್ವಲ್ಪ ನೀರನ್ನು ಸೇರಿಸಿ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಿ.
 
ಪ್ಯಾನ್ ಅನ್ನು ಒಲೆಯ ಮೇಲಿಟ್ಟು 7-8 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಅದಕ್ಕೆ ಉದ್ದಿನಬೇಳೆ, 2 ಚಮಚ ಸಾಸಿವೆ, ಕರಿಬೇವು ಮತ್ತು ಹಸಿಮೆಣಸನ್ನು ಸೇರಿಸಿ ಹುರಿದುಕೊಳ್ಳಿ. ಈ ಮೊದಲೇ ರುಬ್ಬಿಟ್ಟುಕೊಂಡಿರುವ ಮಸಾಲೆಯನ್ನು ಸೇರಿಸಿ 1 ನಿಮಿಷ ಚೆನ್ನಾಗಿ ಮಿಕ್ಸ್‌ಮಾಡಿ. ಈಗ ಇದಕ್ಕೆ ಈ ಮೊದಲೇ ಬೇಯಿಸಿಕೊಂಡಿರುವ ಕಣಲೆ ಮತ್ತು ಕಡಲೆಕಾಳನ್ನು ಸೇರಿಸಿ 7-8 ನಿಮಿಷ ಕಡಿಮೆ ಉರಿಯಲ್ಲಿ ಹುರಿದುಕೊಂಡರೆ ಕಣಲೆ ಪಲ್ಯ ಸವಿಯಲು ಸಿದ್ಧ. ನೀವೂ ಒಮ್ಮೆ ಮಾಡಿನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಟನ್ ಮಸಾಲಾ ಗ್ರೇವಿ