ಬೆಂಗಳೂರು: ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಸೂರ್ಯನ ಶಾಖ ಜನರನ್ನು ಸುಡುವಷ್ಟರ ಮಟ್ಟಿಗೆ ಏರಿಕೆಯಾಗಿದೆ. ಜನರು ಬಿಸಿಲ ಬೇಗೆಗೆ ಈಗಲೇ ಸುಸ್ತಾಗಿದ್ದಾರೆ. ಇನ್ನೂ ಮೂರು ತಿಂಗಳು ಈ ಧಗೆಯನ್ನು ಹೇಗೆ ತಡೆದುಕೊಳ್ಳುವುದಪ್ಪ ಎಂಬ ಚಿಂತೆಯಲ್ಲಿದ್ದಾರೆ. ಉರಿ ಬಿಸಿಲು ಮನುಷ್ಯನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತಿದ್ದು, ಸುಸ್ತು, ತಲೆನೋವು, ಉರಿಮೂತ್ರ, ಚರ್ಮದ ಸಮಸ್ಯೆ, ನಿದ್ರಾಹೀನತೆ, ಕಣ್ಣು ಉರಿ ಭಾದೆಗಳು ಶುರುವಾಗಿದೆ.
ಈ ಬಿಸಿಲಿಗೆ ನಮ್ಮ ಆಹಾರದ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ದೇಹಕ್ಕೆ ಕಾಡುವ ಕೆಲ ಸಮಸ್ಯೆಗಳನ್ನು ದೂರ ಮಾಡಬಹುದು. ದೇಹಕ್ಕೆ ತಂಪಾಗುವ ಆಹಾರಗಳನ್ನು ದಿನನಿತ್ಯ ಸೇವನೆ ಮಾಡಬೇಕು. ಈ ವೇಳೆ ಆರೋಗ್ಯಕರವಾದ ಹಾಗೂ ನೈಸರ್ಗಿಕ ಪಾನೀಯಗಳನ್ನು ಸೇವನೆ ಮಾಡಬೇಕು. ಇಂತಹ ಆರೋಗ್ಯಕರ ಆಹಾರದಲ್ಲಿ ರಾಗಿ ಅಂಬಲಿ ಕೂಡ ಒಂದಾಗಿದೆ.
ದಕ್ಷಿಣ ಕರ್ನಾಟಕದಲ್ಲಿ ರಾಗಿಯನ್ನು ಹೆಚ್ಚಾಗಿ ತಮ್ಮ ಆಹಾರ ಕ್ರಮದಲ್ಲಿ ಬಳಸುತ್ತಾರೆ. ರಾಗಿ ಮುದ್ದೆ, ರೊಟ್ಟಿ, ದೋಸೆ ಇನ್ನಿತರ ಖಾದ್ಯಗಳನ್ನು ತಯಾರಿಸಿ ಸೇವನೆ ಮಾಡುತ್ತಾರೆ. ಇನ್ನೂ ಹಳ್ಳಿ ಮಂದಿಯ ಆರೋಗ್ಯದ ಗುಟ್ಟೇ ಈ ರಾಗಿ ಅಂತಾ ಹೇಳಿದ್ರೆ ತಪ್ಪಾಗಲ್ಲ. ಸಣ್ಣ ಮಗುವಿಂದ ಹಿಡಿದು ವಯಸ್ಸಾದವರಿಗೂ ರಾಗಿಯ ಖಾದ್ಯಗಳನ್ನು ನೀಡುತ್ತಾರೆ. ಇದು ಬೇಗನೇ ಜೀರ್ಣವಾಗಿ, ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಇನ್ನೂ ರಾಗಿ ಅಂಬಲಿಯನ್ನು ಕೆಲವೇ ನಿಮಿಷದಲ್ಲಿ ತಯಾರಿಸಬಹದು.
ಮಾಡುವ ವಿಧಾನ:
ಮೊದಲಿಗೆ ಒಲೆಯ ಮೇಲೆ ಒಂದು ಲೋಟ ನೀರನ್ನು ಕುದಿಸಬೇಕು. ಅದಕ್ಕೆ ರಾಗಿ ಹಿಟ್ಟನ್ನು ಸೇರಿಸಿ, ತೆಳು ಹದಕ್ಕೆ ಆಗುವಷ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆಯನ್ನು ಹಾಕಬೇಕು. ಗಂಟುಗಳು ಇಲ್ಲದ ಹಾಗೆ ಇದನ್ನು ಚೆನ್ನಾಗಿ ತಿರುವಿ ಏ7ರಿಂದ 8 ನಿಮಿಷಗಳ ಬೇಯಿಸಿಬೇಕು. ನಂತರ ತಣ್ಣಗಾದ ಮೇಲೆ ಕುಡಿಯಿರಿ. ಇದಕ್ಕೆ ಮಜ್ಜಿಗೆ ಹಾಗೂ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು. ಇದು ಮತ್ತಷ್ಟು ರುಚಿಯನ್ನು ನೀಡುತ್ತದೆ
ಮಧ್ಯಾಹ್ನ ವೇಳೆ ರಾಗಿ ಅಂಬಲಿ ಕುಡಿಯುವುದರಿಂದ ಉತ್ತಮವಾಗಿದ್ದು, ದೇಹವನ್ನು ಸಮತೋಲನದಲ್ಲಿ ಇರಿಸಿ, ಆರೋಗ್ಯವನ್ನು ಕಾಪಾಡುತ್ತದೆ.