ಭಾರತದ ವೃತ್ತಿಪರ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಅವರು ಪೋಲೆಂಡ್ ಆಂಡ್ರೆಜ್ ಸೋಲ್ಡ್ರಾ ಅವರನ್ನು ಮೇ 13ರಂದು ನಡೆಯುವ ವೃತ್ತಿಪರ ಬಾಕ್ಸಿಂಗ್ ಹಣಾಹಣಿಯಲ್ಲಿ ಎದುರಿಸಲಿದ್ದು, ಅದರ ಬೆನ್ನ ಹಿಂದೆಯೇ ಸ್ವದೇಶಿ ಅಖಾಡದಲ್ಲಿ ಜೂನ್ 11ರಂದು ಅತ್ಯಂತ ನಿರೀಕ್ಷಿತ ಡಬ್ಲ್ಯುಬಿಒ ಏಷ್ಯಾ ಟೈಟಲ್ ಹೋರಾಟ ನಡೆಯಲಿದೆ.
ಬೋಲ್ಟನ್ ಪ್ರೀಮಿಯರ್ ಸೂಟ್‌ನ ಮಾಕ್ರಾನ್ ಸ್ಟೇಡಿಯಂನಲ್ಲಿ ವಿಜೇಂದರ್ ಅವರು ಆಂಡ್ರೆಜ್ ಸೋಲ್ಡ್ರಾ ಅವರನ್ನು ಎದುರಿಸಲಿದ್ದಾರೆ. 30 ವರ್ಷ ವಯಸ್ಸಿನ ಭಾರತೀಯ ಸೂಪರ್ ಮಿಡಲ್ ವೈಟ್ ಬಾಕ್ಸರ್ ಐದು ಹೋರಾಟಗಳಲ್ಲಿ ಐದನ್ನೂ ಗೆದ್ದು ಅಜೇಯರಾಗಿ ಉಳಿದಿದ್ದಾರೆ. ಸೋಲ್ಡ್ರಾ 16 ಹೋರಾಟಗಳಲ್ಲಿ ದಾಖಲೆಯ 12 ಗೆಲುವು ಮತ್ತು 5 ನಾಕ್‍ಔಟ್‍ಗಳೊಂದಿಗೆ ವಿಜೇಂದರ್ ಅವರಿಗೆ ಮುಖಾಮುಖಿಯಾಗಲಿದ್ದಾರೆ.
ಸೋಲ್ಡ್ರಾ ಅವರನ್ನು ವಿಜೇಂದರ್‌ಗೆ ಹೋಲಿಸಿದರೆ ಹೆಚ್ಚು ಅನುಭವಿಯಾಗಿದ್ದು, 81 ಸುತ್ತುಗಳನ್ನು ಆಡಿದ್ದಾರೆ. ಹವ್ಯಾಸಿ ವೃತ್ತಿಜೀವನದಲ್ಲಿ ಮನೋಜ್ಞ ದಾಖಲೆ ಹೊಂದಿರುವ ಸೋಲ್ಡ್ರಾ 98 ಹೋರಾಟಗಳಲ್ಲಿ 82 ಗೆಲುವುಗಳನ್ನು ಗಳಿಸಿದ್ದಾರೆ.
ತಮ್ಮ 6ನೇ ಹೋರಾಟ ಕುರಿತು ಹೇಳಿದ ವಿಜೇಂದರ್, ತಾವು ಸೋಲ್ಡ್ರಾ ಅವರ ಹೋರಾಟದ ವಿಡಿಯೊಗಳನ್ನು ನೋಡಿದ್ದು, ಅವರು ಉತ್ತಮ ಎದುರಾಳಿಯಾಗಿದ್ದಾರೆ. ಆದರೆ ಅಖಾಡದಲ್ಲಿ ಅವರಿಗೆ ಕಠಿಣ ಹೋರಾಟ ನೀಡಲು ನಾನು ಕಠಿಣ ಅಭ್ಯಾಸ ಮಾಡಿದ್ದೇನೆ. ಈ ಹೋರಾಟ ತನಗೆ ಅತ್ಯಂತ ನಿರ್ಣಾಯಕವಾಗಿದ್ದು, ನನ್ನ ಅಜೇಯ ದಾಖಲೆ ಮುಂದುವರಿಸಬೇಕಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.