ಕಾಬೂಲ್ : ಪಶ್ಚಿಮ ಆಫ್ಘಾನಿಸ್ತಾನದ ಹೆರಾತ್ ನಗರದಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದು ಹಾಗೂ ಉದ್ಯಾನಗಳಿಗೆ ಭೇಟಿ ನೀಡುವುದನ್ನು ತಾಲಿಬಾನ್ ನಿಷೇಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಫ್ಘಾನಿಸ್ತಾನವು ಸಂಪ್ರದಾಯವಾದಿ ಮತ್ತು ಪಿತೃಪ್ರಭುತ್ವದ ರಾಷ್ಟ್ರವಾಗಿದೆ, ಆದರೆ ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕುಳಿತು ಊಟ ಮಾಡುವುದನ್ನು ಸಾಮಾನ್ಯ ಎನ್ನುವಂತಾಗಿದೆ. ಮುಖ್ಯವಾಗಿ ಆಫ್ಘಾನ್ ಮಾನದಂಡಗಳನ್ನು ಮೀರಿ ಉದಾರವಾದಿ ನಗರ ಎನಿಸಿರುವ ಹೆರಾತ್‌ನಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿದೆ. ಇಲ್ಲೂ ಸಹ ತಾಲಿಬಾನ್ ಕಠಿಣ ನಿಯಮಗಳನ್ನು ವಿಧಿಸಿದೆ.
ಆಗಸ್ಟ್‌ನಲ್ಲಿ ಆಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಮರಳಿದ ನಂತರ ತಾಲಿಬಾನ್, ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವ ನಿರ್ಬಂಧಗಳನ್ನು ವಿಧಿಸುತ್ತಿದೆ.
ಹೆರಾತ್‌ನಲ್ಲಿ ಸದ್ಗುಣ ಪ್ರಚಾರ ಮತ್ತು ದುರಾಚಾರ ತಡೆಗಟ್ಟುವಿಕೆ ಸಚಿವಾಲಯದ ತಾಲಿಬಾನ್ ಅಧಿಕಾರಿ ರಿಯಾಜುಲ್ಲಾ ಸೀರತ್, ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ನಿಯಮ ಕೇವಲ ಪುರುಷ ಮತ್ತು ಮಹಿಳೆಯರಿಗಷ್ಟೇ ಅಲ್ಲ, ಗಂಡ-ಹೆಂಡತಿಗೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಹೆರಾತ್ ರೆಸ್ಟೋರೆಂಟ್‌ನಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ನನಗೆ ಮತ್ತು ನನ್ನ ಪತಿಗೆ ಮ್ಯಾನೇಜರ್ ಹೇಳಿದ್ದರು ಎಂದು ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.