ನವದೆಹಲಿ : 'ಒಂದು ದೇಶವಾಗಿ ಮಹಿಳೆಯರ ಅಭಿವೃದ್ಧಿಗಿಂತ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಆದ್ಯತೆ ನೀಡುವುದು ಗುರಿಯಾಗಬೇಕು' ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಶನಿವಾರ ಅಭಿಪ್ರಾಯಪಟ್ಟರು.
ಕಾನೂನು ಸೇವಾ ಸಂಸ್ಥೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವನ್ನೂ ಪ್ರತಿಪಾದಿಸಿದರು. ಕಾನೂನು ಸೇವೆಗಳ ಪ್ರಾಧಿಕಾರವು ಸಮಾಜದ ತಳ ಸಮುದಾಯಕ್ಕೆ ನೆರವು ನೀಡಲು ವಿಶೇಷ ಪ್ರಯತ್ನಗಳನ್ನು ಮಾಡಬೇಕು ಎಂದು ಹೇಳಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್ಎಎಲ್ಎಸ್ಎ) ಏರ್ಪಡಿಸಿದ್ದ ಆರು ವಾರಗಳ ಅವಧಿಯ 'ಭಾರತದಲ್ಲಿ ಕಾನೂನು ಅರಿವು ಅಭಿಯಾನ' ಉದ್ಘಾಟಿಸಿ ಅವರು ಮಾತನಾಡಿದರು.
'ಒಂದು ದೇಶವಾಗಿ ಮಹಿಳೆಯರ ಅಭಿವೃದ್ಧಿಯಿಂದ ಮಹಿಳಾ ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮ ಗುರಿಯಾಗಬೇಕು. ಆದ್ದರಿಂದ ಕಾನೂನು ಸೇವಾ ಸಂಸ್ಥೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಬೇಕಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಮಹಿಳಾ ಫಲಾನುಭವಿಗಳನ್ನು ತಲುಪುವುದು ಸಾಧ್ಯವಾಗಲಿದೆ' ಎಂದು ಕೋವಿಂದ್ ಹೇಳಿದರು.
ನ್ಯಾಯವನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರವು ಒಂದು ಅನುಕರಣೀಯ ಪಾತ್ರ ನಿರ್ವಹಿಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದರು.
ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಉಪಸ್ಥಿತರಿದ್ದರು.