ನವದೆಹಲಿ: ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ನಿಧನರಾದ ಬಳಿಕ ಕಾರ್ಯಕಾರಿ ಸಮಿತಿ ಸಭೆ ಕರೆದು ಕಾಂಗ್ರೆಸ್ ನಾಯಕರು ಮಾಜಿ ಪ್ರಧಾನಿಗಳ ಸ್ಮಾರಕ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲು ತೀರ್ಮಾನ ಕೈಗೊಂಡಿತ್ತು. ಆದರೆ ಇದೇ ಮುತುವರ್ಜಿ ಪ್ರಣಬ್ ಮುಖರ್ಜಿ ತೀರಿಕೊಂಡಾಗ ಯಾಕಿರಲಿಲ್ಲ ಎಂದು ಅವರ ಪುತ್ರಿ ಶರ್ಮಿಷ್ಠ ಮುಖರ್ಜಿ ವಾಗ್ದಾಳಿ ನಡೆಸಿದ್ದಾರೆ.
ನನ್ನ ತಂದೆ ಪ್ರಣಬ್ ಮುಖರ್ಜಿ ತೀರಿಕೊಂಡಾಗ ಕಾಂಗ್ರೆಸ್ ನಾಯಕರು ಕಾರ್ಯಕಾರಿ ಸಭೆ ಬಿಡಿ ಶ್ರದ್ಧಾಂಜಲಿ ಸಭೆ ಕರೆಯುವ ಔದಾರ್ಯವನ್ನೂ ತೋರಲಿಲ್ಲ. ಈ ಬಗ್ಗೆ ಹಿರಿಯ ನಾಯಕರೊಬ್ಬರನ್ನು ಕೇಳಿದಾಗ ರಾಷ್ಟ್ರಪತಿ ಹುದ್ದೆಯಲ್ಲಿದ್ದವರಿಗೆ ಇದನ್ನು ಮಾಡಲಾಗುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಆದರೆ ತಂದೆಯ ಡೈರಿಯಿಂದ ಆ ಬಳಿಕ ನನಗೆ ಗೊತ್ತಾಗಿದ್ದು, ಈ ಹಿಂದೆ ಮಾಜಿ ರಾಷ್ಟ್ರಪತಿ ಕೆಆರ್ ನಾರಾಯಣನ್ ತೀರಿಕೊಂಡಾಗ ಕಾಂಗ್ರೆಸ್ ಶ್ರದ್ಧಾಂಜಲಿ ಸಭೆ ನಡೆಸಿತ್ತು.
ಈಗ ಮನಮೋಹನ್ ಸಿಂಗ್ ಜೀ ಅವರಿಗೆ ಸ್ಮಾರಕ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು ಸೂಕ್ತವೇ. ಯಾಕೆಂದರೆ ನಮ್ಮ ತಂದೆಯವರೂ ರಾಷ್ಟ್ರಪತಿಗಳಾಗಿದ್ದಾಗ ಮನಮೋಹನ್ ಸಿಂಗ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕೆಂದಿದ್ದರು. ಆದರೆ ಕೆಲವೊಂದು ಕಾರಣಗಳಿಗೆ ಅದು ಸಾಧ್ಯವಾಗಲಿಲ್ಲ. ಅದನ್ನು ನಾನಿಲ್ಲಿ ಹೇಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ.
ಡಾ ಮನಮೋಹನ್ ಸಿಂಗ್ ಅವರಿಗೆ ಸ್ಮಾರಕ ನಿರ್ಮಿಸುವಂತೆ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಬೆನ್ನಲ್ಲೇ ಶರ್ಮಿಷ್ಠ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.