ನವದೆಹಲಿ: ನಿನ್ನೆ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವ ಮಹಾಯುತಿ ಗೆಲುವು ಸಾಧಿಸುತ್ತಿದ್ದಂತೇ ಇಂಡಿಯಾ ಒಕ್ಕೂಟದ ನಾಯಕ ರಾಹುಲ್ ಗಾಂಧಿ ಬೆರಳಿಗೆ ಹಾಕುವ ಶಾಯಿ ಬಗ್ಗೆ ಚಕಾರವೆತ್ತಿದ್ದರು. ಹಾಗಿದ್ದರೆ ಚುನಾವಣಾ ಆಯೋಗ ಬೆರಳಿಗೆ ಗುರುತು ಹಾಕಲು ಮಾರ್ಕರ್ ಪೆನ್ ಬಳಕೆ ಶುರು ಮಾಡಿದ್ದು ಯಾವಾಗ? ಇಲ್ಲಿದೆ ವಿವರ.
ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಅನೇಕ ಕಡೆ ಮತದಾನ ಮಾಡಿದ ಬಳಿಕ ಮತದಾರರಿಗೆ ಬೆರಳಿಗೆ ಶಾಯಿ ಗುರುತು ಹಾಕಲು ಮಾರ್ಕರ್ ಪೆನ್ ಬಳಸಲಾಗಿದೆ. ಇದನ್ನು ಅಳಿಸುವುದು ಸುಲಭ. ಇದೇ ಕಾರಣಕ್ಕೆ ಅನೇಕರು ಒಂದಕ್ಕಿಂತ ಹೆಚ್ಚು ಬಾರಿ ಮತದಾನ ಮಾಡಿದ್ದಾರೆ. ಇದರಿಂದಲೇ ಬಿಜೆಪಿ ಗೆದ್ದಿದೆ. ಚುನಾವಣಾ ಆಯೋಗ ಭ್ರಷ್ಟಾಚಾರದಲ್ಲಿ ತೊಡಗಿದೆ. ಇದು ದೇಶ ವಿರೋಧಿ ಎಂದು ರಾಹುಲ್ ಗಾಂಧಿ ಕೆಲವು ಫೋಟೋ ಸಮೇತ ಟ್ವೀಟ್ ಮಾಡಿದ್ದರು.
ಮಾರ್ಕರ್ ಪೆನ್ ಬಳಕೆ ಶುರುವಾಗಿದ್ದು ಯಾವಾಗ?
ಆದರೆ ಗುರುತು ಹಾಕಲು ಮಾರ್ಕರ್ ಪೆನ್ ಬಳಕೆ ಇದೇ ಮೊದಲಲ್ಲ. 2011 ರಿಂದ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಗುರುತು ಹಾಕಲು ಮಾರ್ಕರ್ ಪೆನ್ ಬಳಕೆ ಮಾಡುತ್ತಿದೆ. ಶಾಯಿ ಗುರುತಿಗೆ ಹೋಲಿಸಿದರೆ ಇದನ್ನು ಬೇಗನೇ ಅಳಿಸಬಹುದು ಎಂಬ ಆರೋಪಗಳಿದ್ದರೂ ಮಾರ್ಕರ್ ಪೆನ್ ಬಳಕೆ ಜಾರಿಯಲ್ಲಿದೆ.
ಶಾಯಿ ಗುರುತು ಪ್ರಾರಂಭವಾಗಿದ್ದು ಯಾವಾಗ?
1962 ರ ಚುನಾವಣೆ ಬಳಿಕ ಕೈಗೆ ಅಳಿಸಲಾಗದ ಶಾಯಿ ಗುರುತು ಹಾಕುವ ಪದ್ಧತಿಯನ್ನು ಶುರು ಮಾಡಲಾಯಿತು. ಇದು ಅಳಿಸಲು ಕನಿಷ್ಠ 2 ರಿಂದ 3 ವಾರವಾದರೂ ಬೇಕಾಗುತ್ತದೆ. 2006 ರವರೆಗೂ ಒಂದು ಬಿಂದುವಿನಷ್ಟ ಮಾತ್ರ ಗುರುತು ಹಾಕಲಾಗುತ್ತಿತ್ತು. ಆದರೆ ನಂತರ ಬೆರಳು ತುದಿಯವರೆಗೂ ತಲುಪುವಂತೆ ಬ್ರಷ್ ಬಳಸಿ ಉದ್ದ ಗುರುತು ಹಾಕಲಾಗುತ್ತಿದೆ.
ಇದೀಗ ರಾಹುಲ್ ಗಾಂಧಿ ಮತ್ತು ಶಿವಸೇನೆ ಉದ್ಧವ್ ಬಣದ ಆರೋಪದ ನಂತರ ಮಾರ್ಕರ್ ಪೆನ್ ಬಳಕೆ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.