ಪಶ್ಚಿಮ ಬಂಗಾಳ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಮೂರು ಕ್ಷೇತ್ರಗಳಿಗೂ ಅಭ್ಯರ್ಥಿಗಳ ಪಟ್ಟಿಯನ್ನು ತೃಣಮೂಲ ಕಾಂಗ್ರೆಸ್ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭವಾನಿಪುರ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
ಇನ್ನು ಉಳಿದ ಜಂಗೀಪುರ ಕ್ಷೇತ್ರದಲ್ಲಿ ಜಾಕೀರ್ ಹುಸೇನ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ, ಸಂಸರ್ಗಂಜ್ ನಿಂದ ಅರ್ಮಿಲ್ ಇಸ್ಲಾಂ ಚುನಾವಣೆ ಎದುರಿಸಲಿದ್ದಾರೆ. ಶನಿವಾರವಷ್ಟೇ ಈ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಘೋಷಣೆ ಮಾಡಿತ್ತು. ಇದೇ ತಿಂಗಳ ಅಂತ್ಯದಲ್ಲಿ ಅಂದರೆ, ಸೆಪ್ಟೆಂಬರ್ 30ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.
ಕಳೆದ ಎರಡು ತಿಂಗಳ ಹಿಂದೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ನಂದಿ ಗ್ರಾಮದಲ್ಲಿ ಕಣಕ್ಕೆ ಇಳಿದಿದ್ದರು. ಟಿಎಂಸಿ ತೊರೆದು ಹೋದ ತಮ್ಮ ಈ ಹಿಂದಿನ ಆಪ್ತರಾಗಿದ್ದ ಸುವೇಂದು ಅಧಿಕಾರಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ಅವರು ತಮ್ಮ ಭವಾನಿಪುರ ಕ್ಷೇತ್ರವನ್ನು ತೊರೆದಿದ್ದರು. ತೀವ್ರ ಹಣಾಹಣಿಗೆ ಸಾಕ್ಷಿಯಾಗಿದ್ದ ಈ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಗೆಲುವು ಸಾಧಿಸುವ ಮೂಲಕ ಮಮತಾ ಸೋತರು.
ನಂದಿ ಗ್ರಾಮದಲ್ಲಿ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಸೋಲು ಕಂಡರೂ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕ ಬಹುಮತ ಪಡೆದು ಜಯಭೇರಿ ಬಾರಿಸಿತು. ಈ ಹಿನ್ನಲೆ ಅವರನ್ನು ಮುಖ್ಯಮಂತ್ರಿಯಾಗಿ ಪಕ್ಷ ಆಯ್ಕೆ ಮಾಡಿತು.
ಮುಖ್ಯಮಂತ್ರಿಯಾಗಿ ಮುಂದುವರೆಯಲು ಮಮತಾ ಬ್ಯಾನರ್ಜಿ ಶಾಸಕರಾಗಿ ಆಯ್ಕೆಯಾಗುವುದು ಅನಿವಾರ್ಯವಾಗಿದೆ. ಈ ಹಿನ್ನಲೆ ಈಗ ತಮ್ಮ ಕ್ಷೇತ್ರವಾದ ಭವಾನಿಪುರದಿಂದ ಅವರು ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ. ಮಮತಾ ಅವರಿಗಾಗಿಯೇ ಭವಾನಿಪುರದಲ್ಲಿ ಗೆಲುವು ಸಾಧಿಸಿದ್ದ ಟಿಎಂಸಿ ಅಭ್ಯರ್ಥಿ ಶೋಭಂದೇಬ್ ಚಟ್ಟೋಪಾಧ್ಯಾಯ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ರಾಜ್ಯದಲ್ಲಿ ಕೋವಿಡ್-19 ಪ್ರಕರಣ ಕಡಿಮೆಯಾಗಿರುವ ಹಿನ್ನೆಲೆ ಚುನಾವಣಾ ಆಯೋಗ ಚುನಾವಣೆ ನಡೆಸಲು ಸಜ್ಜಾಗಿದ್ದು, ಟಿಎಂಸಿ ಗೆಲುವಿನ ಉತ್ಸಾಹ ಹೊಂದಿದೆ. ನಾವು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದೇವೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ತಿಳಿಸಿದ್ದಾರೆ.
ಆಡಳಿತಾತ್ಮಕ ಅಗತ್ಯತೆಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಹಾಗೂ ಖಾಲಿ ಇರುವ ಶಾಸಕ ಸ್ಥಾನ ಭರ್ತಿ ಮಾಡಲು ಈ ಚುನಾವಣೆ ನಡೆಸಬಹುದು ಎಂದು ಚುನಾವಣಾ ಆಯೋಗಕ್ಕೆ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ಚುನಾವಣೆ ವೇಳೆ ಕೋವಿಡ್ -19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೊತೆಗೆ ಪ್ರಚಾರದ ವೇಳೆ ಯಾವುದೇ ರೋಡ್ ಶೋ, ಯಾವುದೇ ಬೈಕ್ ರ್ಯಾಲಿಗಳನ್ನು ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಇನ್ನು ಈ ಉಪ ಚುನಾವಣೆಯಲ್ಲಿ ಭವಾನಿಪುರದಿಂದ ಕಾಂಗ್ರೆಸ್ ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆಯೇ ಕಾಂಗ್ರೆಸ್ ನಾಯಕ ಅಧೀರ್ ಚೌಧರಿ ತಿಳಿಸಿದ್ದರು