Publish Date: Sun, 22 Mar 2026 (13:52 IST)
Updated Date: Sun, 22 Mar 2026 (13:59 IST)
ಮಧ್ಯಪ್ರದೇಶ: ಇಲ್ಲಿನ ಉಜ್ಜಯಿನಿಯ ಮಹರ್ಷಿ ಸಂದೀಪನಿ ರಾಷ್ಟ್ರೀಯ ವೇದಿಕ್ ಅಧ್ಯಯನ ಸಂಸ್ಥೆಯ ವಸತಿ ಶಾಲೆಯ ವಾರ್ಡನ್ ಒಬ್ಬರು ತನ್ನ ಶಾಲೆಯ ಬಾಲಕನ ಮೇಲೆ ಕ್ರೂರತನ ಮೆರೆದಿದ್ದಾರೆ.
ಶಾಲೆಯ ವಿದ್ಯಾರ್ಥಿಯನ್ನು ಅಲ್ಲಿನ ವಾರ್ಡನ್ ಕೋಲಿನಿಂದ ಕ್ರೂರವಾಗಿ ಹೊಡೆಯುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಾರ್ಡನ್ ಈ ಕ್ರಮ ಕೈಗೊಂಡಿದ್ದಾರೆ. ಅದು ಅಶಿಸ್ತು ಎಂದು ಉಲ್ಲೇಖಿಸಿ ಕೋಲಿನಿಂದ ತಪ್ಪಿತಸ್ಥ ವಿದ್ಯಾರ್ಥಿಗೆ ನಾಲ್ಕಾರು ಜನರ ಎದುರು ವಾರ್ಡನ್ ಮನಸೋಇಚ್ಚೆ ಥಳಿಸಿದ್ದಾರೆ. ಘಟನೆಯನ್ನು ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ರಹಸ್ಯವಾಗಿ ಚಿತ್ರೀಕರಿಸಿದ್ದಾರೆ.
ಘಟನೆ ಬಗ್ಗೆ ಅನೇಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ವಾರ್ಡನ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ಮಕ್ಕಳ ಹಕ್ಕುಗಳ ಆಯೋಗಕ್ಕೆ ಹಾಗೂ ಮಕ್ಕಳ ಕಲ್ಯಾಣ ಸಚಿವರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ಕೇವಲ ಬೇರೆಯವರ ಹಾಸಿಗೆಯಲ್ಲಿ ಮಲಗಿದ್ದಕ್ಕೆ ಇಷ್ಟು ದೊಡ್ಡ ಶಿಕ್ಷೆ ಕೊಡುವ ಅಗತ್ಯವಿರಲಿಲ್ಲ, ಮುಂದೆ ಹೀಗೆ ಮಾಡಬಾರದು ಎಂದು ಬುದ್ಧಿ ಹೇಳಬಹುದಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.