ಸ್ವಾತಂತ್ರ್ಯೋತ್ಸವ ದಿನದಂದು ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಂಡು, ಖಂಡನೆಗೊಳಗಾದಾಗ 'ನಾನು ವಿಐಪಿ' ಎಂದು ಕೃತ್ಯವನ್ನು ಸಮರ್ಥಿಸಿಕೊಂಡಿದ್ದ ಒಡಿಶಾ ಸಚಿವ ಜೋಗೇಂದ್ರ ಬೆಹೆರಾ ಈಗ ರಾಗ ಬದಲಿಸಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇದ್ದು, ಬಾಗಲು ಕಷ್ಟವಾಗುತ್ತಿದ್ದರಿಂದ ಭದ್ರತಾ ಅಧಿಕಾರಿ ಬಳಿ ಶೂ ಲೇಸ್ ಕಟ್ಟಿಕೊಂಡೆ ಎಂದು ಅವರು ಹೊಸ ಸಮರ್ಥನೆಯನ್ನು ನೀಡಿದ್ದಾರೆ.
ನನ್ನ ಎಡ ಕಾಲು ಬಹಳ ನೋವಾಗುತ್ತಿತ್ತು. ಬಾಗಲು ಸಾಧ್ಯವಾಗುತ್ತಿರಲಿಲ್ಲ . ಹೀಗಾಗಿ ಭದ್ರತಾ ಅಧಿಕಾರಿ ತಾವಾಗಿಯೇ ಶೂ ಲೇಸ್ ಕಟ್ಟಿದರು. ಅವರು ನನ್ನ ಮಗನಂತೆ ಎಂದು ಸಚಿವ ಜೋಗೇಂದ್ರ ಬೆಹೆರಾ ಹೇಳಿದ್ದಾರೆ.
ನಾನು ಏಮ್ಸ್ ವೈದ್ಯರನ್ನು ಸಂಪರ್ಕಿಸಿದ್ದಕ್ಕೆ ಪುರಾವೆಯಾಗಿ ಔಷಧಿಸೂಚಿಯನ್ನು ತೋರಿಸಲೇ ಎಂದು ಅವರು ಪ್ರಶ್ನಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಳ್ಳುವುದರ ಮೂಲಕ ಓಡಿಶಾದ ಸಚಿವ ಜೋಗೇಂದ್ರ ಬೆಹೆರಾ ಹೊಸ ವಿವಾದವನ್ನು ಮೈಗೆಳೆದುಕೊಂಡಿದ್ದರು.
ಸೋಮವಾರ ಕಿಂಯೋಜರ್ ಜಿಲ್ಲಾಡಳಿತದ ಮುಂಭಾಗದಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಬೆಹೆರಾ ಮುಖ್ಯ ಅತಿಥಿಗಳಾಗಿದ್ದರು. ಧ್ವಜಾರೋಹಣವನ್ನು ಮಾಡಿದ ಬಳಿಕ ಕೆಳಗೆ ಬಿಚ್ಚಿಟ್ಟಿದ್ದ ಶೂ ತೊಟ್ಟುಕೊಂಡ ಸಚಿವರು ಭದ್ರತಾ ಅಧಿಕಾರಿಯಿಂದ ಲೇಸ್ ಕಟ್ಟಿಸಿಕೊಂಡಿದ್ದರು.
ಈ ದೃಶ್ಯಾವಳಿಯನ್ನು ಸ್ಥಳೀಯ ವಾಹಿನಿಗಳು ಪ್ರಸಾರ ಮಾಡಿದಾಗ ಪ್ರತಿಕ್ರಿಯಿಸಿದ್ದ ಸಚಿವರು, ನಾನು ವಿಐಪಿ, ಧ್ವಜಾರೋಹಣ ಮಾಡಿದ್ದೇನೆ. ಇದನ್ನು ಭದ್ರತಾ ಅಧಿಕಾರಿ ಮಾಡಿಲ್ಲ ಎಂದು ಅಸಂಬದ್ಧವಾಗಿ ಉತ್ತರಿಸಿದ್ದರು.
ಸಚಿವರ ಈ ವರ್ತನೆಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.