ಆಗಸ್ಟ್ 15 ರಂದು ನವದೆಹಲಿಯಲ್ಲಿ ಧ್ವಜಾರೋಹಣ ನಡೆಸಿ ಮಾತನ್ನಾಡುತ್ತಿದ್ದ ಪ್ರಧಾನಿ ಮೋದಿ, ಹಥ್ರಾಸ್ ಬಳಿ ನಾಗ್ಲಾ ಫತೇಲಾ ಎಂಬ ಗ್ರಾಮವಿದೆ. ಅಲ್ಲಿಗೆ ತಲುಪಲು ಕೇವಲ 3 ಗಂಟೆ ಸಾಕು, ಆದರೆ ಆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ತಲುಪಲು 70 ವರ್ಷಗಳು ಬೇಕಾಯಿತು ಎಂದು ಹೇಳಿದ್ದರು. ಈ ಹೇಳಿಕೆ ಆ ಗ್ರಾಮದವರಿಗೆ ಅಚ್ಚರಿಯನ್ನು ತಂದಿಟ್ಟಿದೆ. ಕಾರಣ ಈಗ ಕೂಡ ಆ ಗ್ರಾಮದಲ್ಲಿ ಹಲವರ ಮನೆಗೆ ವಿದ್ಯುತ್ ಸಂಪರ್ಕವಿಲ್ಲ.
ತಾವಿನ್ನೂ ಕತ್ತಲಲ್ಲಿ ಬದುಕುತ್ತಿದ್ದರೂ ಪ್ರಧಾನಿ ಏಕೆ ಹೀಗೆ ಹೇಳಿದರು ಎಂಬುದು ಆ ಹಳ್ಳಿಗರನ್ನು ಕಾಡಿದ ಪ್ರಶ್ನೆ.
ಈ ಗ್ರಾಮದಲ್ಲಿ ಒಟ್ಟು 600 ಮನೆಗಳಿದ್ದು, ಅವುಗಳಲ್ಲಿ 450 ಮನೆಗಳಿಗೆ ಇನ್ನು ಕೂಡ ವಿದ್ಯುತ್ ಸಂಪರ್ಕವಿಲ್ಲ. ಉಳಿದ 150 ಮನೆಗಳು ಸಹ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿವೆ. ಟ್ರಾನ್ಸ್ಫಾರ್ಮರ್‌ನಿಂದ ನೇರವಾಗಿ ಮನೆಗೆ ವಿದ್ಯುತ್ ಸಂಪರ್ಕ ತೆಗೆದುಕೊಂಡಿರುವ ಅವರು ಅದರಿಂದ ಪಂಪ್‌ಸೆಟ್‌ಗಳನ್ನು ಬಳಸುತ್ತಾರೆ. ಪ್ರತಿಯಾಗಿ ಎರಡು ತಿಂಗಳಿಗೆ 395 ರೂಪಾಯಿಗಳನ್ನು ದಕ್ಷಿಣಾಂಚಲ ವಿದ್ಯುತ್ ವಿತರಣ ನಿಗಮ ಲಿಮಿಟೆಡ್‌ಗೆ ಪಾವತಿಸುತ್ತಾರೆ ಎಂದು ಗ್ರಾಮದ ಮುಖ್ಯಸ್ಥ ಯೋಗೇಶ್ ಕುಮಾರ್ ತಿಳಿಸಿದ್ದಾರೆ.
ಪ್ರಧಾನಿಗೆ ನಮ್ಮ ಗ್ರಾಮದ ಪರಿಸ್ಥಿತಿಯ ಅರಿವಿಲ್ಲ ಎನ್ನುತ್ತಾರೆ ಗ್ರಾಮದ ನಿವಾಸಿ ಉಲ್ಲನೂರ್ ಉಸ್ಮಾನಿ.
ನವದೆಹಲಿಯಿಂದ 300 ಕೀಲೋಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ 3,500 ಜನರು ವಾಸಿಸುತ್ತಾರೆ. 900 ನೊಂದಾಯಿತ ಮತದಾರರಿದ್ದಾರೆ.
ಪ್ರಧಾನಿ ಅವರು ಪ್ರಾರಂಭಿಸಿರುವ ಗ್ರಾಮೀಣ ವಿದ್ಯುದೀಕರಣ ಅಭಿಯಾನದ ಅಡಿಯಲ್ಲಿ ಮೂಲಭೂತ ಅಗತ್ಯಗಳನ್ನು ಪಡೆದುಕೊಳ್ಳುತ್ತಿರುವ ದೇಶದ 10,045 ಗ್ರಾಮಗಳ ಪಟ್ಟಿಯಲ್ಲಿ ನಾಗ್ಲಾ ಫತೇಲಾ ಹೆಸರು ಕೂಡ ಇದೆ. ವಿದ್ಯುತ್ ಸಚಿವಾಲಯದ ಪ್ರಕಾರ 2017 ಮೇ ಒಳಗೆ 18,475 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಲಿಸಲಾಗುತ್ತಿದೆ.