ಕಣಿವೆ ನಾಡು ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ. ಬೆಂಕಿಗೆ ತುಪ್ಪ ಸುರಿಯುತ್ತಿರುವ ಪಾಕಿಸ್ತಾನ ಹಿಂಸಾತ್ಮಕ ಧರಣಿಯನ್ನು ಪ್ರಚೋದಿಸಲು ಕೋಟಿಗಟ್ಟಲೆ ಹಣವನ್ನು ಸುರಿಯುತ್ತಿದೆ ಎಂಬ ಸತ್ಯ ಬಯಲಾಗಿದೆ.
ಒಂದು ಅಂದಾಜಿನ ಪ್ರಕಾರ ಧರಣಿಯನ್ನು ನಿಲ್ಲಿಸದಿರಲು ಇಲ್ಲಿಯವರೆಗೆ ಪಾಕಿಸ್ತಾನ 24 ಕೋಟಿ ರೂಪಾಯಿಯನ್ನು ಸುರಿದಿದೆ.
ಅದರಲ್ಲಿ ಹೆಚ್ಚಿನ ಹಣವನ್ನು ನೀಡಿರುವುದು ಪ್ರತ್ಯೇಕತಾವಾದಿ ನಾಯಕ ಆಸಿಯಾ ಅಂದ್ರಾಬಿಯ ದುಖ್ತನಾನ್-ಇ-ಮಿಲ್ಲತ್ ಮತ್ತು ಜಮ್ಮತ್-ಉ- ಇಸ್ಲಾಮಿ ಎಂದು ಸರ್ಕಾರಿ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
ಪ್ರತಿಭಟನೆ ಸದ್ಯದಲ್ಲಿಯೇ ಕೊನೆಗೊಳ್ಳಲಿದೆ ಎಂದು ಭಾವಿಸಲಾಗಿತ್ತು. ಕಳವಳಕಾರಿ ಸಂಗತಿ ಎಂದರೆ ಭದ್ರತಾ ಸಿಬ್ಬಂದಿ ವಿರುದ್ಧ ಪ್ರತಿಭಟನೆಯನ್ನು ಮುಂದುವರೆಸಲು ಕಾಶ್ಮೀರಿ ಯುವಕರಿಗೆ ಹಣ ಪಾವತಿಸುವುದನ್ನು ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
ಕಾಶ್ಮೀರದಲ್ಲಿ ಹಿಂಸಾಚಾರವನ್ನು ನಡೆಸುವಂತೆ ಉಗ್ರ ಸಂಘಟನೆಗಳಾದ ಲಷ್ಕರ್-ಇ-ತೈಬಾ ಮತ್ತು ಜಮ್ಮತ್- ಉದ್-ದವಾವನ್ನು ಪಾಕಿಸ್ತಾನವೇ ಉತ್ತೇಜಿಸುತ್ತಿದೆ ಎಂದು ಭಾರತ ಸದಾ ಆರೋಪಿಸುತ್ತ ಬಂದಿದೆ.
ಇತ್ತೀಚಿಗೆ ಬಂಧಿಸಲ್ಪಟ್ಟ ಎಲ್‌ಇಟಿ ಉಗ್ರ ಬಹಾದ್ದೂರ್ ಅಲಿ ಕೂಡ ತಾನು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಯಿಂದ ತರಬೇತಿ ಪಡೆದಿದ್ದು ಗುಂಪಿನ ನಡುವೆ ಬೆರತು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಲು ನನ್ನನ್ನು ಕಳುಹಿಸಲಾಗಿತ್ತು ಎಂದು ತಪ್ಪೊಪ್ಪಿಕೊಂಡಿದ್ದಾನೆ.