Publish Date: Mon, 19 Sep 2022 (08:29 IST)
Updated Date: Mon, 19 Sep 2022 (08:33 IST)
ಚಂಡೀಗಢ : ಚಂಡೀಗಢ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭುಗಿಲೆದ್ದ ಪ್ರತಿಭಟನೆಯಿಂದಾಗಿ ನಾಳೆಯಿಂದ ಎರಡು ದಿನಗಳ ಕಾಲ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಸೆಪ್ಟೆಂಬರ್ 19, 20 ರಂದು ರಜೆ ಘೋಷಿಸಲಾಗಿದ್ದು, ಪಾಠ-ಪ್ರವಚನಗಳನ್ನು ನಡೆಸದಂತೆ ಸೂಚಿಸಲಾಗಿದೆ. ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಘಟನೆಗೆ ನಿಖರ ಕಾರಣವನ್ನು ವರದಿ ಮಾಡುವಂತೆ ವಿಶ್ವವಿದ್ಯಾಲಯವು ಸೂಚಿಸಿದೆ.
ಉಳಿದಂತೆ ಅಗತ್ಯ ಸೇವೆಗಳು ಲಭ್ಯವಿರಲಿದೆ ಎಂದು ವಿವಿಯ ರಿಜಿಸ್ಟಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಬಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಪೊಲೀಸರಿಂದಲೂ ವಿದ್ಯಾರ್ಥಿಗಳ ಮೇಲೆ ಲಾಟಿ ಚಾರ್ಜ್ ನಡೆದಿದೆ. ಆದರೆ ಕಾಲೇಜಿಗೆ ರಜೆ ಘೋಷಣೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜೊತೆಗೆ ವಿವರಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.