ಜಮ್ಮು: ಜಮ್ಮುವಿದಾದ್ಯಂತ ವರುಣನ ಆರ್ಭಟ ಮುಂದುವರಿದಿದೆ. ಕಾಶ್ಮೀರ ಕಣಿವೆಯ ಮೇಲ್ಭಾಗ ಮತ್ತು ಜಮ್ಮು ಪ್ರದೇಶದಲ್ಲಿ ಹಿಮಪಾತವೂ ಕಂಡುಬಂದಿದೆ.
ಭಾರೀ ಮಳೆ ಮತ್ತು ಹಿಮ ಬೀಳುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದ ಕಾರಣ ಶುಕ್ರವಾರ ಇಡೀ ಜಮ್ಮು ಮತ್ತು ಕಾಶ್ಮೀರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮೂರನೇ ದಿನವೂ ಜಮ್ಮುವಿನ ಹಲವೆಡೆ ನಿರಂತರ ಮಳೆ ಸುರಿಯುತ್ತಿದೆ. ಮಳೆ ಸಂಬಂಧಿತ ಅವಘಡದಲ್ಲಿ ಮಹಿಳೆ ಮತ್ತು ಆಕೆಯ ಮಗ ಸಾವಿಗೀಡಾಗಿದ್ದಾರೆ. ಉಕ್ಕಿ ಹರಿಯುತ್ತಿರುವ ಜಲಮೂಲಗಳಿಂದ 12 ಜನರನ್ನು ರಕ್ಷಿಸಲಾಗಿದೆ.
ಉಧಂಪುರ ಜಿಲ್ಲೆಯ ಮೌಂಗಾರಿ ಬಳಿ ಗುಡ್ಡದಿಂದ ಬಂಡೆಯೊಂದು ಉರುಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶಾನೋ ದೇವಿ (50) ಮತ್ತು ಅವರ ಮಗ ರಘು (25) ಮೃತಪಟ್ಟಿದ್ದಾರೆ.
ರಾಜ್‌ಬಾಗ್ ಪ್ರದೇಶದ ಉಜ್ ನದಿಯಲ್ಲಿ ಸಿಲುಕಿದ್ದ ಕನಿಷ್ಠ 11 ವಲಸೆ ಕಾರ್ಮಿಕರನ್ನು ಪೊಲೀಸ್ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಜಂಟಿ ತಂಡ ರಕ್ಷಿಸಿದೆ.
ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ರಸ್ತೆಗಳ ಸಂಚಾರ ಬಂದ್ ಆಗಿದೆ. ನೂರಾರು ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿವೆ.<>