ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೆ ಈಗಿನಿಂದಲೇ ಕಾವೇರತೊಡಗಿದೆ. ಸರ್ವ ಪಕ್ಷಗಳು ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದು ಈ ಬಾರಿಯೂ ಸಹ ನಾನು ಪ್ರಾಣಿಗಳ ಅಕ್ರಮ ಸಾಗಾಟ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುವುದಾಗಿ ಬಿಜೆಪಿ ನಾಯಕ ಉಪೇಂದ್ರ ತಿವಾರಿ ಹೇಳಿದ್ದಾರೆ.
ಮೂರು ಬಾರಿ ಕಣಕ್ಕಲಿದಿರುವ ಅವರು ಪ್ರತಿ ಬಾರಿಯೂ ಇದೇ ವಿಷಯವನ್ನಿಟ್ಟುಕೊಂಡು ಚುನಾವಣೆಯನ್ನು ಎದುರಿಸಿದ್ದರು. ಈ ಬಾರಿಯೂ ಅದನ್ನೇ ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ.
ಆದರೆ ತಮ್ಮನ್ನು ಗೋ ರಕ್ಷಕರಾಗಿ ಗುರುತಿಸಬೇಕು ಎಂದು ಅವರು ಬಯಸುತ್ತಿಲ್ಲ. ಪ್ರಾಣಿಗಳ ಅಕ್ರಮ ಸಾಗಾಟದ ವಿರುದ್ಧ ನಾನು ಆಂದೋಲನ ನಡೆಸುತ್ತಿರುವುದು ಸಾಮಾಜಿಕ ಸೇವೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಅವರ ಬೆಂಬಲಿಗರೊಬ್ಬರಾದ ಚಂದ್ರಮಾ ಯಾದವ್ ವಿರುದ್ಧ ಇತ್ತೀಚಿಗೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಚಂದ್ರಮಾ ಅವರ ಬಿಡುಗಡೆಗೆ ಆಗ್ರಹಿಸಿ 43 ವರ್ಷದ ತಿವಾರಿ ಹಿಂಸಾತ್ಮಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ನಹ್ರಿ ಪೊಲೀಸ್ ಠಾಣೆಯ ಮುಂದೆ ಶುಕ್ರವಾರ ನಡೆದ ಪ್ರಿತಭಟನೆಯಲ್ಲಿ ಪೊಲೀಸರು ಮತ್ತು ಉದ್ರಿಕ್ತ ಗುಂಪಿನ ನಡುವೆ ಗಲಾಟೆ ನಡೆದು ಬಿಜೆಪಿ ನಾಯಕ ವಿನೋದ್ ರೈ ಬುಲೆಟ್ ಗಾಯದಿಂದ ಮರಣವನ್ನಪ್ಪಿದ್ದರು.
ಅಕ್ರಮ ಪಶು ಸಾಗಾಟವನ್ನು ಪತ್ತೆ ಹಚ್ಚಲು ಜಿಲ್ಲೆಯ ನಾಲ್ಕು ಪ್ರದೇಶಗಳಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸುವಂತೆ ತಿವಾರಿ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ. ಅದರಲ್ಲೊಂದು ಅವರು ಮೂರು ಬಾರಿಯೂ ತಮ್ಮ ವಿರುದ್ಧ ಕಣಕ್ಕಿಳಿದಿರುವ ಹಿರಿಯ ಸಮಾಜವಾದಿ ಲೀಡರ್ ಅಂಬಿಕಾ ಚೌಧರಿ ಅವರ ಮನೆಯ ಮುಂದೆ ಎಂಬುದು ಗಮನಾರ್ಹ.