ಲಕ್ನೋ : ಜನರನ್ನು ಹೆದರಿಸಲು ಮತ್ತು ಕೊಲ್ಲಲು ಈ ಮುನ್ನ ಉತ್ತರ ಪ್ರದೇಶದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿತ್ತು.
ಆದರೆ ಈಗ ದೇಶವನ್ನು ರಕ್ಷಿಸಲು ಶೆಲ್ಗಳು ಮತ್ತು ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಹಿಂದೆ, ಉತ್ತರ ಪ್ರದೇಶದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿತ್ತು. ಅದನ್ನು ಜನರನ್ನು ಹೆದರಿಸಲು ಅಥವಾ ಕೊಲ್ಲಲು ಬಳಸಲಾಗುತ್ತಿತ್ತು. ಇಂದು ಇಲ್ಲಿ ಶೆಲ್ಗಳು ಮತ್ತು ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ.
ಇವುಗಳನ್ನು ಭಾರತವನ್ನು ರಕ್ಷಿಸಲು ಬಳಸಲಾಗುತ್ತದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಬದಲಾವಣೆಯಾಗಿದೆ. ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರಪ್ರದೇಶದಲ್ಲಿ ಇನ್ನೂ ಒಂದಿಬ್ಬರು ಬಾಹುಬಲಿಗಳು ಉಳಿದಿದ್ದಾರೆ. ಅವರನ್ನು ಮಾರ್ಚ್ 10ರ ನಂತರ ಜೈಲಿಗೆ ಕಳುಹಿಸಲಾಗುತ್ತದೆ. ಇನ್ನೂ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸುವವರೆಗೂ ಅಭಿವೃದ್ಧಿ ಸಾಧ್ಯವಿಲ್ಲ ಮತ್ತು ಕೈಗಾರಿಕಾ ಹೂಡಿಕೆಗಳು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.