ನವದೆಹಲಿ: ಕೇಂದ್ರ ಬಜೆಟ್ 2025 ರನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದು ರೈತರಿಗೆ ಸಿಕ್ಕ ಕೊಡುಗೆಗಳೇನು ಎಂಬ ವಿವರ ಇಲ್ಲಿದೆ ನೋಡಿ.
ಮೋದಿ ಸರ್ಕಾರ ಮೂರನೇ ಬಾರಿಗೆ ಅಧಿಕಾರಿ ಸ್ವೀಕರಿಸಿದ ಬಳಿಕ ಮಂಡನೆಯಾಗುತ್ತಿರುವ ಮೊದಲ ಪೂರ್ಣಪ್ರಮಾಣದ ಬಜೆಟ್ ಇದಾಗಿದೆ. ಸತತ 8 ನೇ ಬಾರಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಈ ಬಜೆಟ್ ನಲ್ಲಿ ರೈತರಿಗೆ ಕೆಲವೊಂದು ಕೊಡುಗೆಗಳನ್ನು ನೀಡಲಾಗಿದೆ. ಕಿಸಾನ್ ಕಾರ್ಡ್ ಸಾಲ ಮಿತಿಯನ್ನು ಹೆಚ್ಚಿಸಲಾಗಿದೆ. ಇದುವರೆಗೆ ಇದು 3 ಲಕ್ಷ ರೂ.ಗಳಷ್ಟಿತ್ತು. ಇದೀಗ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ದೇಶದಲ್ಲಿ ಏಳು ಕೋಟಿಗೂ ಅಧಿಕ ರೈತರು ಕಿಸಾನ್ ಕಾರ್ಡ್ ಫಲಾನುಭವಿಗಳಾಗಿದ್ದಾರೆ.
ಬೇಳೆ ಕಾಳುಗಳಲ್ಲಿ ಸ್ವಾವಲಂಬನೆಗೆ ನಿರ್ಮಲಾ ಬಜೆಟ್ ನಲ್ಲಿ 6 ವರ್ಷದ ಮಿಷನ್ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಮಾರುಕಟ್ಟೆಗಳಾದ ಎನ್ಎಎಫ್ಇಇ, ಎನ್ ಸಿಸಿಎಫ್ ನಂತಹ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ರೈತರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಬಹುದು.
ಕಡಿಮೆ ಉತ್ಪನ್ನ ಇರುವ 100 ಜಿಲ್ಲೆಗಳನ್ನು ಗುರಿಯಾಗಿಸಿ ಪಿಎಂ ಧನ್ ಧಾನ್ಯ್ ಯೋಜನೆ ಪ್ರಕಟಿಸಲಾಗಿದೆ. ಬಹುಬೆಳೆ, ಸುಸ್ಥಿರ ಕೃಷಿ ವಿಧಾನ, ನೀರಾವರಿ ಸೌಲಭ್ಯ, ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಕೃಷಿ ಉತ್ಪನ್ನವನ್ನು ಪ್ರೋತ್ಸಾಹಿಸುವ ಗುರಿ ಹೊಂದಲಾಗಿದೆ. ಇದರಿಂದ 1.7 ಕೋಟಿ ರೈತರಿಗೆ ಪ್ರಯೋಜನವಾಗಲಿದೆ.