Publish Date: Fri, 10 Apr 2026 (17:37 IST)
Updated Date: Fri, 10 Apr 2026 (17:39 IST)
ಭೋಪಾಲ್ : ಎರಡೂವರೆ ವರ್ಷದ ಪುಟ್ಟ ಬಾಲಕನೊಬ್ಬ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದು, ಸುಮಾರು 70 ಅಡಿ ಆಳದಲ್ಲಿ ಸಿಲುಕಿಕೊಂಡ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ಸಂಜೆ ಬಾಲಕ ಕೊಳವೆಬಾವಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಭಾರಿ ಪ್ರಮಾಣದ ಕಾರ್ಯಾಚರಣೆ ನಡೆಯುತ್ತಿದೆ. ಮಗುವಿನ ಚಲನವಲನಗಳನ್ನು ಗಮನಿಸಲು ಬೋರ್‌ವೆಲ್‌ನೊಳಗೆ ಕ್ಯಾಮೆರಾದಿಂದ ನೋಡಲಾಗುತ್ತಿದೆ.
ಉಜ್ಜಯಿನಿ ಜಿಲ್ಲೆಯ ಬಡನಗರ ತಹಸಿಲ್ ವ್ಯಾಪ್ತಿಯ ಝಲಾರಿಯಾ ಗ್ರಾಮದಲ್ಲಿ ಏಪ್ರಿಲ್ 9 ರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬಾಲಕನನ್ನು ರಾಜಸ್ಥಾನದ ಪಾಲಿ ಜಿಲ್ಲೆಯ ಭಗೀರಥ್ ಎಂದು ಗುರುತಿಸಲಾಗಿದೆ.
ಕುರಿಗಾಹಿ ಕುಟುಂಬಕ್ಕೆ ಸೇರಿದ ಈ ಬಾಲಕ, ತನ್ನ ಪೋಷಕರೊಂದಿಗೆ ಕುರಿ ಮೇಯಿಸಲು ಇಲ್ಲಿಗೆ ಬಂದಿದ್ದನು. ಕುರಿ ಬೋರ್‌ವೆಲ್ ಮೇಲಿದ್ದ ಕಲ್ಲನ್ನು ತಳ್ಳಿದಾಗ, ಕುತೂಹಲದಿಂದ ಬೋರ್‌ವೆಲ್ ಒಳಗೆ ಇಣುಕಿ ನೋಡಿದ ಬಾಲಕ ಆಯತಪ್ಪಿ ಒಳಗೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ರಕ್ಷಣಾ ಕಾರ್ಯಾಚರಣೆ:
ಬಾಲಕನು ಸುಮಾರು 70 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾನೆ ಎಂದು ಅಂದಾಜಿಸಲಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ವಿಪತ್ತು ಸ್ಪಂದನಾ ಪಡೆ ಮತ್ತು ಪೊಲೀಸರು ಜೆಸಿಬಿ ಹಾಗೂ ಪೋಕ್ಲೇನ್ ಯಂತ್ರಗಳ ಸಹಾಯದಿಂದ ಬೋರ್‌ವೆಲ್‌ಗೆ ಸಮಾನಾಂತರವಾಗಿ ಗುಂಡಿ ತೋಡುತ್ತಿದ್ದಾರೆ.
ಮಗುವಿನ ಚಲನವಲನಗಳನ್ನು ಗಮನಿಸಲು ಬೋರ್‌ವೆಲ್‌ನೊಳಗೆ ಸಣ್ಣ ಕ್ಯಾಮೆರಾವನ್ನು ಬಿಡಲಾಗಿದೆ. ಜಿಲ್ಲಾಧಿಕಾರಿ ರೋಷನ್ ಸಿಂಗ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮಸ್ಥರು ಕೂಡ ರಕ್ಷಣಾ ತಂಡಕ್ಕೆ ಸಹಾಯ ಮಾಡುತ್ತಿದ್ದಾರೆ.