ಪಾಕಿಸ್ತಾನದ ಅತಿ ದೊಡ್ಡ ನಗರ ಕರಾಚಿಯಲ್ಲಿ ಗುರುವಾರ ಮುಂಜಾನೆ ಭೀಕರ ರೈಲು ದುರಂತ ಸಂಭವಿಸಿದ್ದು, ಕನಿಷ್ಠ 16 ಮಂದಿ ಮೃತಪಟ್ಟು 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ ಎರಡನೆಯ ಅತಿದೊಡ್ಡ ರೈಲು ಅಪಘಾತ ಇದಾಗಿದೆ. ಬೋಗಿಯೊಳಗೆ ಸಿಲುಕಿಕೊಂಡವರನ್ನು ಹೊರ ತೆಗೆಯುವ ಕಾರ್ಯ ಭರದಿಂದ ಸಾಗಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಘಟನೆಯ ಬಳಿಕ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಕರಾಚಿಯ ಲ್ಯಾಂಡಿ ರೈಲು ನಿಲ್ದಾಣದ ಬಳಿ ಝಕಾರಿಯಾ ಎಕ್ಸಪ್ರೆಸ್ ಮತ್ತು ಫರೀದ್ ಎಕ್ಸಪ್ರೆಸ್ ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಗಾಯಗೊಂಡವರನ್ನು ಕರಾಚಿಯ ಜಿನ್ಹಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
ಇಲ್ಲಿಯವರೆಗೆ 16 ಜನರು ಮೃತಪಟ್ಟಿರುವುದು ಖಚಿತವಾಗಿದೆ ಎಂದು ಕರಾಚಿಯ ಹಿರಿಯ ಪೊಲೀಸ್ ಅಧಿಕಾರಿ ಜಾವೆನ್ ಅಕ್ಬರ್ ರಿಯಾಜ್ ತಿಳಿಸಿದ್ದಾರೆ.
ಕಳೆದ ಸಪ್ಟೆಂಬರ್ ತಿಂಗಳಲ್ಲಿ ಪಂಜಾಬ್ ಪಾಂತ್ಯದ ಮುಲ್ತಾನ್ ನಗರದಲ್ಲಿ ಎಕ್ಸಪ್ರೆಸ್ ರೈಲು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದು ಕನಿಷ್ಠ 4 ಜನ ಸಾವನ್ನಪ್ಪಿ, 93 ಜನರು ಗಾಯಗೊಂಡಿದ್ದರು.
ಪಾಕಿಸ್ತಾನದಲ್ಲಿರುವುದು ಬಹುತೇಕ ವಸಾಹತು ಕಾಲದ ರೈಲ್ವೇ ನೆಟ್ವರ್ಕ್ ಆಗಿದ್ದು ಕಳಪೆ ನಿರ್ವಹಣೆಯಿಂದಾಗಿ ಇತ್ತೀಚಿನ ದಶಕಗಳಲ್ಲಿ ದುರಸ್ತಿ ಆಗದೆ ಬಿದ್ದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ