Publish Date: Tue, 16 Jun 2026 (12:29 IST)
Updated Date: Tue, 16 Jun 2026 (12:31 IST)
ನವದೆಹಲಿ: ದೇಶಾದ್ಯಂತ ಕೋಟ್ಯಂತರ ಜನರು ಬಳಸುವ ಜನಪ್ರಿಯ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಂ ಅನ್ನು ಭಾರತ ಸರ್ಕಾರವು ಜೂನ್ 22ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿದೆ. ಜೂನ್ 21 ರಂದು ದೇಶಾದ್ಯಂತ ನಡೆಯಲಿರುವ ನೀಟ್ ಯುಜಿ 2026 ಮರುಪರೀಕ್ಷೆಯ ಹಿನ್ನೆಲೆಯಲ್ಲಿ, ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿಗಳು ಮತ್ತು ಪರೀಕ್ಷಾ ವಂಚನೆ ಜಾಲಕ್ಕೆ ಬ್ರೇಕ್ ಹಾಕಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಕಠಿಣ ನಿರ್ಧಾರ ಕೈಗೊಂಡಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಶಿಫಾರಸಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) 2000ರ ಸೆಕ್ಷನ್ 69A ಅಡಿಯಲ್ಲಿ ಟೆಲಿಗ್ರಾಂ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಟೆಲಿಗ್ರಾಂ ಬ್ಯಾನ್ ಮಾಡಲು ಮುಖ್ಯ ಕಾರಣವೇನು
'ಟೈಮ್‌ಸ್ಟ್ಯಾಂಪ್ ಫ್ರಾಡ್' ವಂಚನೆ:ಟೆಲಿಗ್ರಾಂನಲ್ಲಿರುವ ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯವನ್ನು ವಂಚಕರು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಪರೀಕ್ಷೆ ಮುಗಿದ ನಂತರ ಹಳೆಯ ಪೋಸ್ಟ್‌ಗಳನ್ನು ಎಡಿಟ್ ಮಾಡಿ, ಅದರಲ್ಲಿ ಅಸಲಿ ಪ್ರಶ್ನೆ ಪತ್ರಿಕೆಯನ್ನು ಸೇರಿಸುತ್ತಿದ್ದರು. ಆದರೆ ಆ ಪೋಸ್ಟ್‌ನ ಹಳೆಯ ಸಮಯ ಹಾಗೇ ಇರುತ್ತಿತ್ತು. ಇದರಿಂದ ಪರೀಕ್ಷೆಗೆ ಮುನ್ನವೇ ಪೇಪರ್ ಲೀಕ್ ಆಗಿದೆ ಎಂಬ ಸುಳ್ಳು ಪುರಾವೆ ಸೃಷ್ಟಿಸಿ ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸಲಾಗುತ್ತಿತ್ತು.
ನಕಲಿ ಚಾನೆಲ್‌ಗಳ ಹಾವಳಿ:
ಟೆಲಿಗ್ರಾಂನಲ್ಲಿ ನಂತಹ ನಕಲಿ ಗ್ರೂಪ್‌ಗಳನ್ನು ಸೃಷ್ಟಿಸಿ, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ನಕಲಿ ಪ್ರಶ್ನೆ ಪತ್ರಿಕೆಗಳ ಹೆಸರಿನಲ್ಲಿ ಸಾವಿರಾರು ರೂಪಾಯಿಗಳಿಂದ ಲಕ್ಷಾಂತರ ರೂಪಾಯಿವರೆಗೆ ಹಣ ವಸೂಲಿ ಮಾಡಲಾಗುತ್ತಿತ್ತು.
ಸಾರ್ವಜನಿಕ ಸುವ್ಯವಸ್ಥೆ ಮತ್ತು ಪಾರದರ್ಶಕತೆ:
ಜೂನ್ 21ರ ನೀಟ್ ಮರುಪರೀಕ್ಷೆಯು ಯಾವುದೇ ಗೊಂದಲವಿಲ್ಲದೆ ಅತ್ಯಂತ ಸುರಕ್ಷಿತವಾಗಿ ಮತ್ತು ಪಾರದರ್ಶಕವಾಗಿ ನಡೆಯಲು ಈ ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯವಾಗಿತ್ತು ಎಂದು ಎನ್‌ಟಿಎ ತಿಳಿಸಿದೆ.
ಜೂನ್ 30ರವರೆಗೆ ಮೆಸೇಜ್ ಎಡಿಟಿಂಗ್ ಬ್ಯಾನ್!
ಕೇಂದ್ರ ಸರ್ಕಾರವು ಕೇವಲ ಆ್ಯಪ್ ನಿರ್ಬಂಧಿಸುವುದಷ್ಟೇ ಅಲ್ಲದೆ, ಮತ್ತೊಂದು ಮಹತ್ವದ ಆದೇಶ ಹೊರಡಿಸಿದೆ. ಭಾರತದಲ್ಲಿ ಟೆಲಿಗ್ರಾಂನ ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯವನ್ನು ಜೂನ್ 30, 2026 ರವರೆಗೆ ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲು ಸೂಚಿಸಿದೆ. ಇದರಿಂದಾಗಿ ಪರೀಕ್ಷೆ ಮುಗಿದ ಮೇಲೆಯೂ ಯಾವುದೇ ರೀತಿಯ ಡಿಜಿಟಲ್ ಪುರಾವೆಗಳನ್ನು ತಿರುಚಲು ಸಾಧ್ಯವಾಗುವುದಿಲ್ಲ.
ಅಧಿಕೃತ ಕೆಲಸಗಳು ಮತ್ತು ದೈನಂದಿನ ಸಂವಹನಕ್ಕಾಗಿ ಟೆಲಿಗ್ರಾಂ ಅನ್ನು ಕಾನೂನುಬದ್ಧವಾಗಿ ಬಳಸುವ ಲಕ್ಷಾಂತರ ಭಾರತೀಯ ನಾಗರಿಕರಿಗೆ ಈ ನಿರ್ಧಾರದಿಂದ ತಾತ್ಕಾಲಿಕವಾಗಿ ತೊಂದರೆಯಾಗಲಿದೆ. ಈ ಸಾರ್ವಜನಿಕ ಅನನುಕೂಲಕ್ಕಾಗಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ತೀವ್ರ ವಿಷಾದ ವ್ಯಕ್ತಪಡಿಸಿದೆ. ಆದರೆ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪರೀಕ್ಷೆಯ ಪವಿತ್ರತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಜೂನ್ 22ರವರೆಗೆ ಈ ತಾತ್ಕಾಲಿಕ ನಿಷೇಧ ಅನಿವಾರ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ