ನವದೆಹಲಿ: ಭಾರತವನ್ನು ಡೆಡ್ ಎಕಾನಮಿ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಡಿಶಾಪ ಹಾಕಿದ್ದಕ್ಕೆ ಪ್ರತಿಕ್ರಿಯಿಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸರಿಯಾಗಿಯೇ ಹೇಳಿದ್ದಾರೆ, ಭಾರತದ ಆರ್ಥಿಕತೆ ಸತ್ತಿದೆ ಎಂದಿದ್ದಾರೆ. ಇದಕ್ಕೆ ತೇಜಸ್ವಿ ಸೂರ್ಯ ಕಾಮೆಂಟ್ ಮಾಡಿದ್ದು, ಈತ ಭಾರತಕ್ಕೆ ಎಂಥಾ ದೌರ್ಭಾಗ್ಯ ಎಂದಿದ್ದಾರೆ.
ಭಾರತಕ್ಕೆ ಭಾರೀ ಪ್ರಮಾಣದಲ್ಲಿ ಸುಂಕ ಘೋಷಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆ ಸತ್ತ ಆರ್ಥಿಕತೆ. ಆ ದೇಶಗಳು ನಶಿಸಿಹೋಗಲಿವೆ ಎಂದು ಹಿಡಿಶಾಪ ಹಾಕಿದ್ದಾರೆ. ಟ್ರಂಪ್ ಹೇಳಿಕೆ ಬಗ್ಗೆ ಮಾಧ್ಯಮಗಳ ಮುಂದೆ ರಾಹುಲ್ ಪ್ರತಿಕ್ರಿಯಿಸಿದ್ದಾರೆ.
ಹೌದು ಟ್ರಂಪ್ ಸರಿಯಾಗಿಯೇ ಹೇಳಿದ್ದಾರೆ. ಪ್ರಧಾನ ಮಂತ್ರಿ ಮತ್ತು ವಿತ್ತ ಸಚಿವೆಗೆ ಬಿಟ್ಟು ಎಲ್ಲರಿಗೂ ಗೊತ್ತು, ಭಾರತದ ಆರ್ಥಿಕತೆ ಸತ್ತು ಹೋಗಿದೆ. ಡೊನಾಲ್ಡ್ ಟ್ರಂಪ್ ಸತ್ಯ ಹೇಳಿದ್ದಕ್ಕೆ ನನಗೆ ಸಂತೋಷವಾಗಿದೆ. ಭಾರತದ ಆರ್ಥಿಕತೆ ಸತ್ತಿದೆ ಎಂದು ಇಡೀ ವಿಶ್ವಕ್ಕೇ ಗೊತ್ತು. ಅದಾನಿ ಜೊತೆ ಸೇರಿಕೊಂಡು ಬಿಜೆಪಿ ಭಾರತದ ಆರ್ಥಿಕತೆಯನ್ನು ಬರ್ಬಾದ್ ಮಾಡಿದೆ ಎಂದಿದ್ದಾರೆ.
ರಾಹುಲ್ ಹೇಳಿಕೆ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ಈತ ನಮ್ಮ ದೇಶದಲ್ಲಿರುವುದು ಎಂಥಾ ದೌರ್ಭಾಗ್ಯ. ಭಾರತವನ್ನು ಯಾರಾದರೂ ತೆಗಳಿದರೂ ಈ ವ್ಯಕ್ತಿಗೆ ಸಂತೋಷ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.