ಹೈದರಾಬಾದ್: ಟಿಡಿಪಿ ಶಾಸಕರೊಬ್ಬರಿಗೆ ಆಪ್ತರಾಗಿರುವ ವ್ಯಕ್ತಿಯಿಂದ ಯುವತಿಯ ಮೇಲೆ ಆಸಿಡ್ ದಾಳಿ ನಡೆದಿದ್ದು, ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ಈಗ ಜಸ್ಟಿಸ್ ಫಾರ್ ಗೌತಮಿ ಟ್ರೆಂಡ್ ಆಗಿದೆ.
ಟಿಡಿಪಿ ಕಾರ್ಯಕರ್ತನಾಗಿರುವ ಗಣೇಶ್ ಎಂಬಾತ ಕೃತ್ಯವೆಸಗಿದ್ದಾನೆ. ಈತನಿಗೆ ಗೌತಮಿ ಮೇಲೆ ಪ್ರೇಮವಿತ್ತು. ಆದರೆ ಆಕೆ ಪ್ರೀತಿ ನಿರಾಕರಿಸಿದ್ದಕ್ಕೆ ಗಣೇಶ್ ಸಿಟ್ಟಿಗೆದ್ದಿದ್ದ. ಜೊತೆಗೆ ಗೌತಮಿಗೆ ಇದೇ ಏಪ್ರಿಲ್ ನಲ್ಲಿ ಮದುವೆಯೂ ನಿಶ್ಚಯವಾಗಿತ್ತು.
ಈ ಕಾರಣಕ್ಕೆ ರೊಚ್ಚಿಗೆದ್ದಿದ್ದ ಗಣೇಶ್ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಲ್ಲದೆ, ಆಸಿಡ್ ಎರಚಿ ಕ್ರೌರ್ಯ ಮರೆದಿದ್ದಾನೆ. ಆರೋಪಿ ಗಣೇಶ್ ತಂದೆ ಮುರಳಿ ಟಿಡಿಪಿ ಶಾಸಕರೊಬ್ಬರ ನಿಕಟವರ್ತಿ ಎನ್ನಲಾಗಿದೆ.
ಈ ಕಾರಣಕ್ಕೆ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್ ಕಲ್ಯಾಣ್, ಗೃಹಸಚಿವರೂ ಈ ವಿಚಾರದಲ್ಲಿ ಮೌನವಾಗಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಸ್ಟಿಸ್ ಫಾರ್ ಗೌತಮಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದಾರೆ.