ಚೆನ್ನೈ: ಕೇಂದ್ರದ ವಿರುದ್ಧ ಹಿಂದಿ ವಿರೋಧಿ ಮತ್ತು ಜನಸಂಖ್ಯೆ ಆಧಾರಿತವಾಗಿ ಕ್ಷೇತ್ರ ವಿಂಗಡಣೆ ಮಾಡುವ ನಿರ್ಧಾರದ ವಿರುದ್ಧ ಹೋರಾಟಕ್ಕಿಳಿದಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಈಗ ತಮಿಳುನಾಡಿನ ನವವಿವಾಹಿತರು ಬೇಗ ಬೇಗ ಮಕ್ಕಳನ್ನು ಮಾಡಿಕೊಳ್ಳಿ, ಅವುಗಳಿಗೆ ತಮಿಳು ಹೆಸರುಗಳನ್ನೇ ಇಡಿ ಎಂದು ಆರ್ಡರ್ ಕೊಟ್ಟಿದ್ದಾರೆ!
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಹಿಂದಿ ಮತ್ತು ಸಂಸ್ಕೃತ ಹೇರಿಕೆಯ ಭಾಗ ಎಂದು ಎಂಕೆ ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಬಿಡಲ್ಲ ಎಂದಿದ್ದಾರೆ. ಪ್ರಾದೇಶಿಕ ಭಾಷೆಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದಿದ್ದರು. ಇದರ ಜೊತೆಗೆ ಕ್ಷೇತ್ರ ಮರುವಿಂಗಡಣೆ ಮಾಡುವ ಸುಳಿವನ್ನು ಕೇಂದ್ರ ನೀಡಿತ್ತು. ಇದರ ವಿರುದ್ಧ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳು ಪ್ರತಿರೋಧ ವ್ಯಕ್ತಪಡಿಸಿವೆ.
ಈ ನಿಟ್ಟಿನಲ್ಲಿ ತಮಿಳುನಾಡು ಸಿಎಂ ನವವಿವಾಹಿತರಿಗೆ ಬೇಗನೇ ಮಗು ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ. ತಮಿಳುನಾಡಿನ ಡಿಎಂಕೆ ನಾಯಕರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಎಂಕೆ ಸ್ಟಾಲಿನ್ ಈ ಕರೆ ಕೊಟ್ಟಿದ್ದಾರೆ.
ಇಷ್ಟು ದಿನ ಮದುವೆ ಬಳಿಕ ದಂಪತಿಗಳು ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಬೇಕು. ಮಕ್ಕಳನ್ನು ಹಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಲಿ ಎಂಬುದು ನಮ್ಮ ಅಭಿಪ್ರಾಯವಾಗಿತ್ತು. ಆದರೆ ಈಗ ನವ ದಂಪತಿಗಳು ಬೇಗನೇ ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದೇನೆ. ಬೇಗನೇ ಮಕ್ಕಳನ್ನು ಮಾಡಿಕೊಂಡು ಅವುಗಳಿಗೆ ತಮಿಳು ಹೆಸರುಗಳನ್ನೇ ಇಡಬೇಕು. 2026 ಕ್ಕೆ ಮೊದಲು ಜನ ಸಂಖ್ಯೆ ಆಧಾರಿತವಾಗಿ ಕ್ಷೇತ್ರ ಮರುವಿಂಗಡಣೆ ಮಾಡುವ ಮೊದಲೇ ಮಕ್ಕಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಗಮನಹರಿಸಬೇಕು. ಇಲ್ಲದೇ ಹೋದರೆ ದಕ್ಷಿಣದ ರಾಜ್ಯಗಳ ಸಂಸದೀಯ ಕ್ಷೇತ್ರಗಳು ಕಡಿಮೆಯಾಗಲಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.