Publish Date: Thu, 29 Jan 2026 (17:07 IST)
Updated Date: Thu, 29 Jan 2026 (17:09 IST)
ನವದೆಹಲಿ: ಜಾತಿ ಆಧಾರಿತ ಅವಹೇಳನ, ಅನ್ಯಾಯ ತಡೆಯುವ ನಿಟ್ಟಿನಿಂದ ವಿಶ್ವ ವಿದ್ಯಾಲಯ ಧನಸಹಾಯ ಅಯೋಗ (ಯುಜಿಸಿ) ತಂದಿದ್ದ ಹೊಸ ನಿಯಮಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಕ್ಯಾಂಪಸ್ ಗಳಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಮೇಲೆ ಜಾತಿ ಆಧಾರಿತ ದೌರ್ಜನ್ಯವನ್ನು ತಡೆಯುವುದು ಇದರ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ ನಿಯಮಗಳು, 2026 ಎಂಬ ಹೊಸ ನಿಯಮವನ್ನು ಜಾರಿಗೆ ತರಲಾಗಿತ್ತು.
ಈ ನಿಯಮದಂತೆ ವಿಶ್ವವಿದ್ಯಾಲಯಗಳಲ್ಲಿ ಎಸ್ ಸಿ, ಎಸ್ ಟಿ, ಹಿಂದುಳಿದ ವರ್ಗದವರನ್ನೊಳಗೊಂಡ ಸಮಾನತಾ ಸಮಿತಿಯೊಂದನ್ನು ರಚಿಸಬೇಕು. ಇದು ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯವಾದರೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಇದರಲ್ಲಿ ಜನರಲ್ ಕೆಟಗರಿ ವಿದ್ಯಾರ್ಥಿಗಳ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಹೀಗಾಗಿ ಜನರಲ್ ಕೆಟಗರಿ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸಿದ್ದರು.
ಇದೀಗ ಸುಪ್ರೀಂಕೋರ್ಟ್ ಈ ನಿಯಮದಿಂದ ತುಂಬಾ ಅಪಾಯಕಾರಿ ಪರಿಣಾಮಗಳಾಗಬಹುದು ಎಂದು ಅಭಿಪ್ರಾಯಪಟ್ಟಿದ್ದು ತಾತ್ಕಾಲಿಕ ತಡೆ ನೀಡಿದೆ. ದೂರು ಪರಿಹಾರ ಸಮಿತಿಯಿಂದ ಸಾಮಾನ್ಯ ವಿದ್ಯಾರ್ಥಿಗಳನ್ನು ಹೊರಗಿಟ್ಟಿರುವುದು ತಾರತಮ್ಯ ಉಂಟು ಮಾಡುವಂತಿದೆ ಎಂದು ನಿಯಮದ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಮೇಲ್ನೋಟಕ್ಕೆ ನಿಯಮಗಳಲ್ಲಿ ದೋಷಗಳಿವೆ. ಅದನ್ನು ಸರಿಪಡಿಸಲು ತಜ್ಞರು ಕೆಲಸ ಮಾಡಬೇಕು ಎಂದು ಕೋರ್ಟ್ ಹೇಳಿದೆ. ಸದ್ಯಕ್ಕೆ ಯುಜಿಸಿ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್ ನೀಡಿದ್ದು ಮಾರ್ಚ್ 19 ರೊಳಗಾಗಿ ಉತ್ತರಿಸಲು ಸೂಚಿಸಿದೆ.