ನವದೆಹಲಿ : ಸೊಳ್ಳೆಗಳ ಸಂತಾನಾಭಿವೃದ್ಧಿಗೆ ಕಾರಣವಾಗುವ ಜನರ ವಿರುದ್ಧ ದಂಡ ವಿಧಿಸುವ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಬೇಕು.
ದೆಹಲಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದ್ದು, 5,000ಕ್ಕೆ ದಂಡವನ್ನು ಸೀಮಿತಗೊಳಿಸದೇ 50,000 ರೂ. ನಿಗದಿಪಡಿಸಬೇಕು ಎಂದು ಹೇಳಿದೆ.
ದೆಹಲಿಯಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನಲೆ ಹೈಕೋರ್ಟ್ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದು ಅದರ ವಿಚಾರಣೆ ನಡೆಸುತ್ತಿದೆ. ಇಂದು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಾಧೀಶ ವಿಪಿನ್ ಸಂಘಿ ದಂಡದ ಪ್ರಮಾಣ ಹೆಚ್ಚಿಸಲು ಸೂಚಿಸಿದರು.
ದೆಹಲಿಯಲ್ಲಿ ನಿಯಂತ್ರಣದಲ್ಲಿದ್ದ ಡೆಂಗ್ಯೂ, ಮಲೇರಿಯಾ ಪ್ರಕಣಗಳು ಮತ್ತೆ ಹೆಚ್ಚುತ್ತಿದೆ. ಈ ಹಿನ್ನೆಲೆ ತಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಆಗದಂತೆ ಜನರು ಕಟ್ಟೆಚ್ಚರ ವಹಿಸಲು ಜಾಗೃತಿ ಮೂಡಿಸಬೇಕು. ಈ ಹಂತದಲ್ಲಿ ದಂಡದ ಪ್ರಮಾಣವನ್ನು ಪರಿಶೀಲಿಸುವ ಅಗತ್ಯ ಇದೆ ಎಂದು ಕೋರ್ಟ್ ಹೇಳಿದೆ.
ನಿಯಮ ಉಲ್ಲಂಘಿಸುವ ಜನರ ವಿರುದ್ಧ ಸ್ಥಳದಲ್ಲೇ 500 ರಿಂದ 50,000 ರೂ.ವರೆಗೂ ದಂಡ ವಿಧಿಸಲಾಗುತ್ತಿದೆ. ಅದಾಗ್ಯೂ ದೆಹಲಿ ಸರ್ಕಾರ 5,000ಕ್ಕೆ ದಂಡ ಸೀಮಿತಗೊಳಿಸಲು ಇಚ್ಛಿಸಿತ್ತು.