ಮಂಗಳೂರು : ವಧುವಿನ ಕೊರಳಿಗೆ ಹೂವಿನ ಹಾರ ಹಾಕುವ ಸಂದರ್ಭದಲ್ಲಿ ಆಕೆಯ ಕೈಗೆ ತಾಗಿತ್ತೆಂದು ಆಕೆ ಮದುವೆನೇ ಕ್ಯಾನ್ಸಲ್ ಮಾಡಿದ ವಿಚಿತ್ರ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ಹೌದು. ಮದುವೆ ಅದ್ಧೂರಿಯಾಗಿ ನಡೆಯುತ್ತಿದ್ದು, ಇನ್ನೇನು ವರನು ವಧುವಿನ ಕೊರಳಿಗೆ ತಾಳಿ ಕಟ್ಟುವ ಶುಭ ವೇಳೆಯಲ್ಲೇ ಕ್ಯಾತೆ ತೆಗೆದ ವಧು ಮದುವೆಯನ್ನೇ ನಿಲ್ಲಿಸಿದ್ದಾಳೆ. ವರ ಬೆಳ್ತಂಗಡಿ ತಾಲೂಕಿನವನಾಗಿದ್ದು, ಈತನಿಗೆ ಮೂಡುಕೊಣಾಜೆ ಮೂಲದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು.
ಅಂತೆಯೇ ಇಬ್ಬರ ಮದುವೆ ನಾರಾವಿ ದೇವಸ್ಥಾನದ ಸಮೀಪದಲ್ಲಿರುವ ಸಬಾಭವನದಲ್ಲಿ ನಡೆಯುತ್ತಿತ್ತು. ಈ ಶುಭ ಸಮಾರಂಭಕ್ಕೆ ಸುಮಾರು 500ಕ್ಕೂ ಹೆಚ್ಚು ಜನ ಪಾಲ್ಗೊಳ್ಳುವವರಿದ್ದರು.
ಇತ್ತ ತಾಳಿ ಕಟ್ಟುವ ಮೊದಲು ಸಂಪ್ರದಾಯದಂತೆ ವಧು-ವರ ಪರಸ್ಪರ ಹಾರ ಬದಲಾಯಿಸಿಕೊಳ್ಳುತ್ತಿದ್ದರು. ಪದ್ಧತಿಯಂತೆ ವರ ಹೂವಿನ ಹಾರ ಹಾಕಲು ಅಣಿಯಾದಾಗ ಆತನ ಕೈ ವಧುವಿನ ಕೈಗೆ ತಾಗಿದೆ. ಆಗಲೇ ವಧು ವರನ ಮೇಲೆ ಸಿಟ್ಟಾಗಿದ್ದಳು. ಆ ಬಳಿಕ ಮಾತುಕತೆಯ ಮೂಲಕ ಬಗೆಹರಿಸಿಕೊಂಡು ಕಾರ್ಯಕ್ರಮ ಮುಂದುವರಿದಿದೆ.
ಇತ್ತ ಇನ್ನೇನು ತಾಳಿ ಕಟ್ಟುವ ಸಮಯ ಬಂದೇ ಬಿಡ್ತು. ಅಂತೆಯೇ ವರ ತಾಳಿ ಕಟ್ಟಲು ಮುಂದಾದಾಗ ವಧು ತಾಳಿಯ ಸಹಿತ ಹೂವಿನ ಹಾರವನ್ನು ಎಸೆದು ಮದುವೆ ಬೇಡವೆಂದಿದ್ದಾಳೆ. ಇದರಿಂದ ವರ ದಿಗ್ಭ್ರಮೆಗೊಂಡಿದ್ದು, ಸಮಾರಂಭದಲ್ಲಿಯೇ ವಧು-ವರನ ಕುಟುಂಬಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅದಾಗಲೇ ಮಾಹಿತಿ ತಿಳಿದ ವೇಣೂರು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.