ಕಳೆದ 5ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಹೀನಾಯ ಅತ್ಯಾಚಾರ, ಕೊಲೆ ಆರೋಪಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಜೀವಾವಧಿಗೆ ಮಾರ್ಪಾಡು ಮಾಡಿದೆ.
2011ರಲ್ಲಿ ನಡೆದ ಈ ಘಟನೆ ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿತ್ತು. ತ್ರಿಶೂರ್‌ನಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸೌಮ್ಯ ಎಂಬ ಯುವತಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರಗೈದಿದ್ದ ಗೋವಿಂದ ಚಾಮಿ ಬಳಿಕ ಆಕೆಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿ ಕೊಲೆಗೈದಿದ್ದ ಎಂಬ ಆರೋಪವಿದೆ.
ವಿಚಾರಣೆ ನಡೆಸಿದ್ದ ಕ್ಷಿಪ್ರಗತಿಯ ನ್ಯಾಯಾಲಯ ಅಪರಾಧಿಗೆ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿದ್ದರೂ ಸುಪ್ರೀಂಕೋರ್ಟ್ ಆತನನ್ನು ಸಾವಿನಿಂದ ಬಚಾವ್ ಮಾಡಿದೆ.
ಗೋವಿಂದ ಚಾಮಿ ಸೌಮ್ಯಳನ್ನು ರೈಲಿನಿಂದ ಹೊರತಳ್ಳಿರುವುದಕ್ಕೆ ನಿಮ್ಮಲ್ಲಿ ಸಾಕ್ಷ್ಯವಿದೆಯೇ ಎಂದು ನ್ಯಾಯಮೂರ್ತಿ ರಂಜನ್ ಗೋಗೊಯಿ ನೇತೃತ್ವದ ತ್ರಿಸದಸ್ಯ ಪೀಠ ಕೇಳಿದ ಪ್ರಶ್ನೆಗೆ ಸರ್ಕಾರಿ ವಕೀಲರಿಂದ ಉತ್ತರವಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನಿಗೆ ನೀಡಿದ್ದ ಮರಣದಂಡನೆಯನ್ನು ಕೋರ್ಟ್ ಜೀವಾವಧಿಗೆ ಇಳಿಸಿತು.
ಸುಪ್ರೀಂ ಆದೇಶಕ್ಕೆ ಮೃತ ಸೌಮ್ಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಯಾವ ರೀತಿಯ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ