ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ 23ನೆಯ ಚಾತುರ್ಮಾಸ್ಯವು “ಗೋಚಾತುರ್ಮಾಸ್ಯ”ವಾಗಿ ಆಚರಿತವಾಗುತ್ತಿದ್ದು, ಗೋವಿನ ಸಂರಕ್ಷಣೆ - ಸಂವರ್ಧನೆ - ಸಂಶೋಧನೆ - ಸಂಬೋಧನೆಗಳಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮ ವೈವಿಧ್ಯಗಳಿಂದ ಸಂಯೋಜಿತವಾಗಿದ್ದ ಗೋಚಾತುರ್ಮಾಸ್ಯವು ನಾಳೆ (16/09/2016) ಸೀಮೋಲ್ಲಂಘನದೊಂದಿಗೆ ಪರಿಸಮಾಪ್ತವಾಗಲಿದೆ.
ಬೆಳಗ್ಗೆ 10.00 ಗಂಟೆಗೆ ಶ್ರೀಕರಾರ್ಚಿತ ರಾಮದೇವರ ಪೂಜೆ ನಡೆಯಲಿದ್ದು, ಮಧ್ಯಾಹ್ನ 12.30 ಗೆ ಕೆಂಗೇರಿಯ ಓಂಕಾರಾಶ್ರಮಕ್ಕೆ ತೆರಳುವ ಮೂಲಕ ಸೀಮೋಲ್ಲಂಘನ ವಿಧಿವಿಧಾನಗಳು ಸಂಪನ್ನವಾಗಲಿದೆ. ಮಧ್ಯಾಹ್ನ 3.00 ಗಂಟೆಗೆ ಸೀಮೋಲ್ಲಂಘನ ದಿನದ ಗೋಸಂದೇಶ ಸಭೆ ನಡೆಯಲಿದ್ದು, ಸಮಾಜಮುಖೀ ಕಾರ್ಯದಲ್ಲಿ ತೊಡಗಿಕೊಂಡಿರುವ ಡಾ|| ಗೋಪಿನಾಥ್, ಕಾಂತಜೆ ಈಶರ ಭಟ್, ದೊಂಬೆ ಶಿವರಾಮಯ್ಯನವರು ಹಾಗೂ ಡಾ. ಎಂ ಪಿ ಕರ್ಕಿ ಅವರುಗಳಿಗೆ ಈ ವರ್ಷದ ಚಾತುರ್ಮಾಸ್ಯದ ಪ್ರಶಸ್ತಿಯನ್ನು ಶ್ರೀಗಳು ಅನುಗ್ರಹಿಸಲಿದ್ದಾರೆ.
ಗೋಕಿಂಕರ ಯಾತ್ರೆ:
ಗೋವಿನ ಕುರಿತಾದ ಭಾವಜಾಗರಣೆಯ ಮಹಾಭಿಯನ, ‘ಗೋಕಿಂಕರ ಯಾತ್ರೆ’ ನಾಳೆ ಶುಭಾರಂಭಗೊಳ್ಳಲ್ಲಿದೆ. ಬೆಂಗಳೂರಿನ ಶ್ರೀರಾಮಚಂದ್ರಾಪುರಮಠದ ಶಾಖಾಮಠ, ಮಹಾರಾಷ್ಟ್ರದ ಪಂಡರಾಪುರ, ಗೋವಾದ ರಾಮನಾಥಿ, ಆಂದ್ರದ ಮಂತ್ರಾಲಯ ಹಾಗೂ ಕೇರಳದ ಮಧೂರುಗಳಿಂದ ಗೋಯಾತ್ರೆ ಆರಂಭವಾಗಲಿದ್ದು ರಥ ಚಲಿಸುವ ಪ್ರದೇಶದಲ್ಲಿ ಗೋವಿನ ಕುರಿತಾಗಿ ಜಾಗೃತಿಯನ್ನು ಮೂಡಿಸಲಿದೆ.
ಈ ಕಾರ್ಯಕ್ರಮಕ್ಕೆ ತಮ್ಮ ಮಾಧ್ಯಮದ ಪ್ರತಿನಿಧಿಗಳನ್ನು ಕಳಿಸಿ ಸಹಕರಿಸಬೇಕಾಗಿ ಕೋರಿಕೊಳ್ಳುತ್ತೇವೆ
ಚಾತುರ್ಮಾಸ್ಯ ಪ್ರಶಸ್ತಿ ಪುರಸ್ಕೃತರ ವಿವರ:
ಡಾ|| ಗೋಪಿನಾಥ್
ಡಾ|| ಗೋಪಿನಾಥರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬರಿಗೆ ಗ್ರಾಮದಲ್ಲಿ 20.07.1941ರಂದು ಜನಿಸಿದರು. ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಆ.S.ಂ.ಇ. ಪೂರೈಸಿ ಜಾಮ್ ನಗರದಲ್ಲಿ ಆಯುರ್ವೇದದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದರು. 27 ವರ್ಷಗಳ ಕಾಲ ಉಪನ್ಯಾಸಕರಾಗಿ ಪ್ರೊಫೆಸರರಾಗಿ, ಸ್ನಾತಕೋತ್ತರ ಪದವಿ ತರಗತಿಗಳಿಗೆ ಶಿಕ್ಷಕರಾಗಿ ವಿವಿಧೆಡೆ ಸೇವೆ ಸಲ್ಲಿದ್ದಾರೆ. ಆಡಳಿತಾತ್ಮಕವಾಗಿ ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ, ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಶ್ರೀಶ್ರೀ ಆಯುರ್ವೇದ ಕಾಲೇಜುಗಳ ಪ್ರಥಮ ಪ್ರಾಂಶುಪಾಲರಾಗಿ, ಪರೀಕ್ಷಕರಾಗಿ, ಭಾರತೀಯ ವೈದ್ಯಕೀಯ ಕೇಂದ್ರ ಮಂಡಳಿ, ನವದೆಹಲಿ ಮತ್ತು ಹತ್ತು ಹಲವು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮತ್ತು ಪರೀಕ್ಷಾಮಂಡಳಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಆಯುರ್ವೇದ ವಿಶ್ವಕೋಶದ ಸಂಪಾದಕರಾಗಿ ಸೇವೆಸಲ್ಲಿಸಿದ್ದಾರೆ. ಯು.ಎಸ್.ಎ ಯಲ್ಲಿ ಹೊರದೇಶದವರಿಗಾಗಿ ಸಂಕ್ಷಿಪ್ತ ಕೋರ್ಸ್, ಲಂಡನ್ನಲ್ಲಿ ಆಯುರ್ವೇದ ಃ.S.(ಊoಟಿ.) ಆರಂಭಿಸಲು ತಜ್ಞ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಕಾಂತಜೆ ಈಶರ ಭಟ್
ಓರ್ವ ಸಶ್ರಮಿ ಕೃಷಿಕನಾಗಿ, ಉದ್ಯಮಿಯಾಗಿ, ವ್ಯವಹಾರಸ್ಥನಾಗಿ, ಸಮಾಜ ಸೇವಕನಾಗಿ, ಧಾರ್ಮಿಕ ಮುಂದಾಳಾಗಿ, ಗುರುವಾಯನಕೆರೆಯ ನಮ್ಮ ಮನೆ, ವೇಣೂರಿನ ಬಳಿಯಿರುವ ಗುಂಡೂರಿಯ'ಕಾವೇರಮ್ಮ ಅಮೃತಧಾರಾ ಗೋಶಾಲೆ ಮುಖ್ಯಸ್ಥರಾಗಿ, ಶ್ರೀಮಠ ಶ್ರೀಗುರುಗಳ ನಿಷ್ಠಾವಂತ ಭಕ್ತನಾಗಿ ದುಡಿಯುತ್ತಿರುವವರು. ಮಲೆಬೆಟ್ಟು ಶ್ರೀವನದುರ್ಗಾ ದೇಗುಲ, ದೇಲಂಪುರಿಯ ಶ್ರೀಮಹಾದೇವ ಮಹಾಗಣಪತಿ ದೇವಸ್ಥಾನಗಳಲ್ಲಿ ತಮ್ಮ ನಾಯಕತ್ವದಿಂದ ಸ್ವತಹ ದುಡಿಯುವ ಮೂಲಕ ಸಮಾಜಸೇವೆ ಮಾಡಿದವರು. ಹವ್ಯಕ ಸಮಾಜಕ್ಕೆ ಬೆಳ್ತಂಗಡಿ ತಾಲೂಕಿನಲ್ಲೊಂದು ನೆಲ-ನೆಲೆ ಒದಗಿಸಿಕೊಟ್ಟು ಸಮಾಜದಲ್ಲಿ ಮಾದರಿಯಾಗಿ ತಲೆಯೆತ್ತಿ ನಿಲ್ಲುವಂತೆ ಮಾಡಿರುವ ಛಲಗಾರ ಸಾಧಕ ಕಾಂತಜೆ ಈಶರ ಭಟ್.
ದೊಂಬೆ ಶಿವರಾಮಯ್ಯನವರು
ತಾಂತ್ರಿಕ ಸೇವೆಗಾಗಿ ಆಳರಸರಿಂದ ಆಮಂತ್ರಿತರಾಗಿದ್ದ ಕುಟುಂಬದವರಾದ ದೊಂಬೆ ಶಿವರಾಮಯ್ಯನವರು ಪ್ರಸಿದ್ಧ ವಿಭೂತಿ ಮನೆತನದವರು. ನಾರಾಯಣಪ್ಪ ಹಾಗೂ ಲಕ್ಷ್ಮಮ್ಮನವರ ಮಗನಾಗಿ 03/09/1945 ಜನಿಸಿದ ಅವರು ಬಿ.ಕಾಂ, ಎಲ್.ಎಲ್.ಬಿ ಪದವೀಧರರು. ರಂಗಭೂಮಿಯ ಹವ್ಯಾಸಿ ನಟರಾದ ಇವರು ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಿ.ವಿ ಕಾರಂತರ ನಿರ್ದೇಶನದಲ್ಲಿ ನಟನೆಮಾಡಿದ ಹಿರಿಮೆ ಇವರದ್ದು. ಗ್ರಾಮ ಪಂಚಾಯತಿ, ಸೇವಾಸಹಕಾರಿ ಸಂಘ ಹಾಗೂ ಶ್ರೀಮಠದ ಸೀಮಾ ಗುರಿಕಾರ, ಕೇಂದ್ರ ಪರಿಷತ್ ಉಪಾಧ್ಯಕ್ಷ ,ಮಹಾಮಂಡಲದ ಉಪಾಧ್ಯಕ್ಷರಾಗಿಯೂ ನಿಸ್ವಾರ್ಥ ಸೇವೆ ಸಲ್ಲಿಸಿದ ಇವರು, ಸಿರವಂತೆಯ ತ್ರಿಪುರಾಂತಕೇಶ್ವರ ಯಕ್ಷಗಾನ ಸಂಘದ ಕಾರ್ಯದರ್ಶಿಯಾಗಿ 41 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತ್ರಿಪುರಾಂತಕೇಶ್ವರ ದೇವಾಲಯದ ಪುನರ್ನಿರ್ಮಾಣ, ರಾಮಾಯಣ ಮಹಾಸತ್ರ ಹಾಗೂ ಯಕ್ಷಗಾನ ಮಹಾಸಮ್ಮೇಳನದಲ್ಲಿ ಇವರು ಗಣನೀಯ ಸೇವೆ ಸಲ್ಲಿಸಿದ್ದಾರೆ.
ಡಾ. ಎಂ ಪಿ ಕರ್ಕಿ
ಹೊನ್ನಾವರದ ಸುಪ್ರಸಿದ್ದ ನ್ಯಾಯವಾದಿ, ಸ್ವಾತಂತ್ರ್ಯಹೋರಾಟಗಾರರಾದ ಪರಮೆಶ್ವರ ಗಣೇಶ ಕರ್ಕಿ ಹಾಗು ಶ್ರೀಮತಿ ಅನುಸೂಯ ಇವರ ಮಗನಾಗಿ 16/07/1935 ರಲ್ಲಿ ಜನಿಸಿದ ಎಂ.ಪಿ ಕರ್ಕಿ ಅವರು, ಮುಂಬಯಿನ ಪ್ರಸಿದ್ಧ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪಡೆದರು. ಗ್ರಾಮೀಣ ಭಾಗದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ ಇವರು ಬಡವರ ಡಾಕ್ಟರ್ ಎಂದೇ ಪ್ರಸಿದ್ದರಾದ ಇವರು ,ಅನೇಕ ಸಹಕಾರಿ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು. ಜನಸಂಘದ ಸಕ್ರಿಯ ಕಾರ್ಯಕರ್ತರಾಗಿ, ಎರಡು ಬಾರಿ ಶಾಸಕರಾಗಿ ರಸ್ತೆಗಳ ನಿರ್ಮಾಣ, ಶಾಲೆ-ಕಾಲೇಜುಗಳ ನಿರ್ಮಾಣ, ರೈತರಿಗೆ-ಮೀನುಗಾರರಿಗೆ ಮನೆಯ ಹಕ್ಕುಪತ್ರ ಕೊಡಿಸುವು್ದು ಹಾಗೂ ಕುಡಿಯುವ ನೀರನ್ನು ಒದಗಿಸಿ ಜನಸೇವೆಯಲ್ಲಿ ತೊಡಗಿಸಿಕೊಂಡರು. ಶ್ರೀಮಠದ ಎಲ್ಲಾ ಯೋಜನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ