ನವದೆಹಲಿ : ಭಾರತ – ಚೀನಾ ಗಡಿ ಸಮಸ್ಯೆಯ ಕುರಿತು ಕೇಂದ್ರ ಸರ್ಕಾರ ಚರ್ಚಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ನ ಸಂಸದರು ಬುಧವಾರ ಸದನದಿಂದ ಹೊರನಡೆದರು.
ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ತಕ್ಷಣ ಭಾರತ- ಚೀನಾ ಗಡಿ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌದರಿ ಒತ್ತಾಯಿಸಿದರು.
ಅಷ್ಟೇ ಅಲ್ಲದೇ 1962ರಲ್ಲಿ ಚೀನಾ ಯುದ್ಧ ನಡೆಯುವಾಗ ಅಂದಿನ ಪ್ರಧಾನಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರು ಅವರು ಲೋಕಸಭೆಯಲ್ಲಿ ಭಾರತದ ಬಗ್ಗೆ ಚರ್ಚಿಸಲು ಅವಕಾಶ ನೀಡಿದ್ದರು. ಅಂದು ನೆಹರು ಅವರು 165 ಸಂಸದರಿಗೆ ಈ ಬಗ್ಗೆ ಮಾತನಾಡಲು ಅವಕಾಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಭಾರತ – ಚೀನಾ ಗಡಿ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದರು.