ನವದೆಹಲಿ: ಮೊನ್ನೆಯಷ್ಟೇ ರಾಹುಲ್ ಗಾಂಧಿ ಬಗ್ಗೆ ಎನ್ ಡಿಎ ನಾಯಕರು ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ, ಇವರನ್ನು ನಿಯಂತ್ರಿಸಿ ಎಂದು ಪ್ರಧಾನಿ ಮೋದಿಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದರು. ಇದೀಗ ಕಾಂಗ್ರೆಸ್ ಗೆ ಕೇಂದ್ರ ಸಚಿವ ಜೆಪಿ ನಡ್ಡಾ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಕೈ ನಾಯಕರು ಸಾಕಷ್ಟು ಸಂದರ್ಭಗಳಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆ ಶಬ್ಧಗಳನ್ನೆಲ್ಲಾ ಪಟ್ಟಿಮಾಡಿ ಟ್ವೀಟ್ ಮಾಡಿರುವ ಜೆಪಿ ನಡ್ಡಾ ಅಂದು ಮೋದಿ ಬಗ್ಗೆ ನಾಚಿಕೆಯಿಲ್ಲದೇ ಹೇಳಿಕೆ ನೀಡಿದ್ದಿರಿ, ಈಗ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದರೆ ನೋವಾಗುತ್ತದಾ ಎಂದು ಟಾಂಗ್ ಕೊಟ್ಟಿದ್ದಾರೆ.
ಈ ಹಿಂದೆ ಮೋದಿಯವರನ್ನು ಸಾವಿನ ವ್ಯಾಪಾರಿ ಎಂದು ಕರೆದಿದ್ದು ಇದೇ ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿಯವರಲ್ಲವೇ? ನೀವು ಮತ್ತು ನಿಮ್ಮ ಪಕ್ಷ ನಾಚಿಕೆಯಿಲ್ಲದೇ ಅಂತಹ ಹೇಳಿಕೆಯನ್ನು ವೈಭವೀಕರಿಸಿದ್ದೀರಿ. ಆಗ ಕಾಂಗ್ರೆಸ್ ರಾಜಕೀಯ ಸೌಹಾರ್ದತೆ ಮರೆತಿತ್ತೇ? ಎಂದು ಜೆಪಿ ನಡ್ಡಾ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರು ಸಾಕಷ್ಟು ಬಾರಿ ಪ್ರಧಾನಿ ಮೋದಿಯನ್ನು ಹಾವು, ಚೇಳು, ರಾಕ್ಷಸ, ಪಿಕ್ ಪಾಕೆಟರ್, ಹೇಡಿ, ನತದೃಷ್ಟ ಎಂದೆಲ್ಲಾ ಕರೆದಿದ್ದರು. ಮೋದಿಯ ಪೋಷಕರನ್ನೂ ಅವಮಾನಿಸಲಾಗಿತ್ತು. ಆಗೆಲ್ಲಾ ಸೌಹಾರ್ದತೆ ನೆನಪಾಗಲಿಲ್ಲವೇ ಎಂದು ಜೆಪಿ ನಡ್ಡಾ ಪ್ರಶ್ನೆ ಮಾಡಿದ್ದಾರೆ. ರಾಹುಲ್ ವಿದೇಶಕ್ಕೆ ಹೋಗಿ ಮೀಸಲಾತಿಯನ್ನು ರದ್ದುಗೊಳಿಸುವ, ಬುಡಕಟ್ಟು ಜನಾಂಗದವರ ಹಕ್ಕು ಕಸಿದಿರುವ ಬಗ್ಗೆ ಮಾತನಾಡುತ್ತಾರೆ. ಪ್ರಜಾಪ್ರಭುತ್ವವನ್ನು ಅತೀ ಹೆಚ್ಚು ದುರುಪಯೋಗಪಡಿಸಿದ್ದೇ ಕಾಂಗ್ರೆಸ್, ಅದಕ್ಕೆ ತುರ್ತು ಪರಿಸ್ಥಿತಿ ಹೇರಿದ್ದೇ ಉದಾಹರಣೆ ಎಂದು ಜೆಪಿ ನಡ್ಡಾ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.