ಬೆಂಗಳೂರು: ವಕ್ಫ್ ಆಸ್ತಿ ಎಂದರೆ ಅದು ಅಲ್ಲಾಹನದ್ದು, ಅದನ್ನು ಮುಟ್ಟಿದರೆ ಯಾರೂ ಉದ್ದಾರ ಆಗಲ್ಲ ಎಂದು ಸಚಿವ ಜಮೀರ್ ಅಹ್ಮದ್ ಹಿಡಿ ಶಾಪ ಹಾಕಿದ್ದಾರೆ.
ಕಳೆದ ಬಾರಿ ಲೋಕಸಭೆ ಕಲಾಪದಲ್ಲಿ ಕೇಂದ್ರ ಸರ್ಕಾರ ವಕ್ಫ್ ಆಸ್ತಿ ತಿದ್ದುಪಡಿ ಮಸೂದೆ ಮಂಡಿಸಲು ಮುಂದಾಗಿತ್ತು. ಬಳಿಕ ಮಿತ್ರ ಪಕ್ಷಗಳು ಮತ್ತು ವಿಪಕ್ಷಗಳಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಚರ್ಚಿಸಿ ನಂತರ ಮಸೂದೆ ಮಂಡಿಸುವುದಾಗಿ ಹೇಳಿತ್ತು. ಇದರ ವಿರುದ್ಧ ಮುಸ್ಲಿಮರು ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೀಗ ಸಚಿವ ಜಮೀರ್ ಅಹ್ಮದ್ ವಕ್ಫ್ ಆಸ್ತಿ ಕಬಳಿಕೆ ಮಾಡಲು ಬಿಡಬಾರದು ಎಂದಿದ್ದಾರೆ. ವಕ್ಫ್ ಆಸ್ತಿ ಅಲ್ಲಾಹನಗೆ ಸೇರಿದ ಆಸ್ತಿ. ಇದನ್ನು ಯಾರೂ ಮುಟ್ಟಬಾರದು. ಅದನ್ನು ಕಬಳಿಸಿದರೆ ಯಾರೂ ಬರಕತ್ (ಉದ್ದಾರ) ಆಗಲ್ಲ. ಹೀಗಾಗಿ ಅಲ್ಲಾಹನ ಆಸ್ತಿಯನ್ನು ನಾವೆಲ್ಲರೂ ಸಂರಕ್ಷಣೆ ಮಾಡಬೇಕು ಎಂದು ಜಮೀರ್ ಹೇಳಿದ್ದಾರೆ.
ಅಲ್ಲಾಹನ ಆಸ್ತಿ ನುಂಗಿದವರಿಗೆ ಜೀವನದ ಕೊನೆ ದಿನಗಳು ಅತ್ಯಂತ ಕಠಿಣವಾಗಿರುತ್ತದೆ. ಏನಿದ್ದರೂ ವಕ್ಫ್ ಅದಾಲತ್ ನಲ್ಲಿ ಮಾತನಾಡಬೇಕು. ವಕ್ಫ್ ಆಸ್ತಿ ಸಂರಕ್ಷಿಸಲು ಪ್ರತೀ ಆಸ್ತಿ ಸುತ್ತ ಬೇಲಿ ನಿರ್ಮಿಸಲಾಗುವುದು. ರಾಜ್ಯದಲ್ಲಿ 1.08 ಲಕ್ಷ ಎಕರೆ ವಕ್ಫ್ ಆಸ್ತಿಯಿದೆ. ಇದರಲ್ಲಿ 85 ಸಾವಿರ ಎಕರೆ ಒತ್ತುವರಿಯಾಗಿದೆ ಎಂದು ಜಮೀರ್ ಹೇಳಿದ್ದಾರೆ.