ನವದೆಹಲಿ: ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ರಾಮ್‌ದೇವ್ ಅವರು ನೀಡಿದ್ದ ಶರಬತ್ ಜಿಹಾದ್ ಹೇಳಿಕೆಗೆ ದೆಹಲಿ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೇಳಿಕೆಯು ಅಸಮರ್ಥನೀಯ ಮತ್ತು ನ್ಯಾಯಾಲಯಕ್ಕೆ ಆಘಾತ ತಂದಿದೆ ಎಂದು ಹೇಳಿದೆ.
ಈ ತಿಂಗಳ ಆರಂಭದಲ್ಲಿ ಪತಂಜಲಿಯ ರೋಸ್ ಶರಬತ್ ಅನ್ನು ರಾಮ್‌ದೇವ್ ಪ್ರಾರಂಭಿಸಿದರು. ರೋಸ್ ಶರಬತ್ ಪ್ರಚಾರದ ವಿಡಿಯೊದಲ್ಲಿ ನಿಮಗೆ ಶರಬತ್ ನೀಡುವ ಕಂಪೆನಿಗಳಿದೆ. ಆದರೆ, ಆ ಕಂಪೆನಿಗಳು ಗಳಿಸಿದ ಹಣವನ್ನು ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸಲಾಗುತ್ತದೆ. ಆದರೆ, ನೀವು ಪತಂಜಲಿಯ ರೋಸ್ ಶರಬತ್ ಕುಡಿದರೆ ಗುರುಕುಲಗಳು ನಿರ್ಮಾಣವಾಗುತ್ತವೆ, ಆಚಾರ್ಯ ಕುಲಂ ಅಭಿವೃದ್ಧಿಯಾಗುತ್ತದೆ, ಪತಂಜಲಿ ವಿಶ್ವವಿದ್ಯಾಲಯವು ವಿಸ್ತರಿಸುತ್ತದೆ ಎಂದು ಹೇಳಿದ್ದರು.
ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ನಂತರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು, ಯಾವುದೇ ಬ್ರ್ಯಾಂಡ್ ಅಥವಾ ಸಮುದಾಯವನ್ನು ಉದ್ದೇಶಿಸಿ ಹೇಳಿಲ್ಲ ಎಂದಿದ್ದರು.
ರಾಮದೇವ್ ಅವರು ಪ್ರಚಾರ ವಿಡಿಯೊದಲ್ಲಿ ಯಾವುದೇ ಕಂಪೆನಿಯ ಹೆಸರನ್ನು ಹೇಳಿರಲಿಲ್ಲ. ಆದರೆ, ಹಮ್ದರ್ದ್ ರೂಹ್ ಅಫ್ಜಾವನ್ನು ಗುರಿಯಾಗಿಸಿಕೊಂಡಿದ್ದರು ಎಂದು ಹೇಳಲಾಗಿತ್ತು.
ಇದನ್ನು ಪ್ರಶ್ನಿಸಿ ಹಮ್ದರ್ದ್ ಕಂಪೆನಿಯು ಬಾಬಾ ರಾಮ್‌ದೇವ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿತ್ತು. ಮಂಗಳವಾರ ಹೈಕೋರ್ಟ್‌ಗೆ ಹಮ್ದರ್ದ್ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ, ಇದು ಸಮುದಾಯದ ನಡುವೆ ಬಿರುಕು ಸೃಷ್ಟಿಸುವ ಪ್ರಕರಣವಾಗಿದೆ. ದ್ವೇಷ ಭಾಷಣವಾಗಿದೆ. ರಾಮ್‌ದೇವ್ ಅವರು ಇದು ಶರಬತ್ ಜಿಹಾದ್ ಎಂದು ಹೇಳಿದ್ದರು. ಅವರು ಅವರ ಉದ್ಯಮ ನೋಡಿಕೊಳ್ಳಲಿ, ನಮಗೇಕೆ ತೊಂದರೆ ಕೊಡುತ್ತಿದ್ದಾರೆ ಎಂದು ವಾದಿಸಿದರು.