ರಾಷ್ಟ್ರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶದಲ್ಲಿ ತಾಪಮಾನ ಏರಿಕೆಯಾದಾಗ ರಾಹುಲ್ ವಿದೇಶಕ್ಕೆ ತೆರಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ತಾಪಮಾನ ಏರಿಕೆಯಾದಾಗ ರಾಹುಲ್ ಬಾಬಾ ವಿದೇಶಕ್ಕೆ ತೆರಳುತ್ತಾರೆ ಮತ್ತು ಬಳಿಕ ಬಿಜೆಪಿಯಿಂದ ಆಡಳಿತದ ದಾಖಲೆ ಕೇಳುತ್ತಾರೆ ಎಂದು ಅವರು ಹೇಳಿದ್ದಾರೆ.
ಬಸ್ತಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ಅವರು 2017ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿಯನ್ನು ಸೋಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಜನರಲ್ಲಿ ಆಗ್ರಹಿಸಿದ್ದಾರೆ. ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳನ್ನು ರಾಜ್ಯದಿಂದ ಹೊರದಬ್ಬಿ. ಅವರ ಉಪಸ್ಥಿತಿಯಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಅವರು ಕರೆ ನೀಡಿದ್ದಾರೆ.
ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಈ ಎರಡು ಪಕ್ಷಗಳೇ ಕಾರಣ ಎಂದು ಪ್ರತಿಪಾದಿಸಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುತ್ತ ಬಿಜೆಪಿ ದೇಶಕ್ಕೆ ಮಾತನ್ನಾಡುವ ಪ್ರಧಾನಿಯನ್ನು ನೀಡಿದೆ. ಅವರು ವಿದೇಶಗಳಲ್ಲಿ ಭಾರತಕ್ಕೆ ವೈಭವವನ್ನು ತಂದುಕೊಡುತ್ತಿದ್ದಾರೆ. ಕಾಂಗ್ರೆಸ್ ಪ್ರಧಾನಿ ಬಹುಮುಖ್ಯ ವಿಷಯಗಳ ಬಗ್ಗೆ ಮಾತನ್ನಾಡುತ್ತಿದುದು ಅಪರೂಪವಾಗಿತ್ತು ಎಂದು ಅವರು ಟೀಕಿಸಿದ್ದಾರೆ.
ಸಮಾಜವಾದಿ ಪಕ್ಷದ ಕಡೆ ಕೂಡ ಬಾಣ ಪ್ರಯೋಗಿಸಿದ ಅವರು, ಇದು ಗೋರಕ್ ನಾಥರ ಭೂಮಿ, ನಾನು ಮಾತಾಡಿದ್ದು ಲಖನೌನಲ್ಲಿರುವ ನೇತಾಜಿಯನ್ನು ( ಮುಲಾಯಂ ಸಿಂಗ ಯಾದವ್) ಅವರನ್ನು ತಲುಪಬಹುದು. ಅಪರಾಧಿಗಳು ಮತ್ತು ಭೂ ಮಾಫಿಯಾ ಎಸ್‌ಪಿ ಸರ್ಕಾರದಲ್ಲಿ ಮೈಲುಗೈ ಸಾಧಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.