ನವದೆಹಲಿ: ಸಂವಿಧಾನ ವಿಚಾರವಾಗಿ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸಂವಿಧಾನವನ್ನೇ ಓದಿಲ್ಲ ಎಂದಿದ್ದಾರೆ.
ಚುನಾವಣಾ ಸಮಾವೇಶದಲ್ಲಿ ಮೋದಿ ವಿರುದ್ಧ ಸಂವಿಧಾನ ಪುಸ್ತಕ ಹಿಡಿದು ರಾಹುಲ್ ಗಾಂಧಿ ಕುಟುಕಿದ್ದಾರೆ. ಮೋದಿಗೆ ಸಂವಿಧಾನ ಪುಸ್ತಕ ಕೇವಲ ಖಾಲಿ ಹಾಳೆಯಾಗಿ ಕಾಣುತ್ತದೆ. ಯಾಕೆಂದರೆ ಅವರು ಯಾವತ್ತೂ ಸಂವಿಧಾನ ಪುಸ್ತಕವನ್ನೇ ಓದಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಇದು ಎರಡನೇ ಬಾರಿಗೆ ರಾಹುಲ್ ಈ ರೀತಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಪ್ರತೀ ಚುನಾವಣಾ ಸಮಾವೇಶದಲ್ಲೂ ಸಂವಿಧಾನ ಪುಸ್ತಕ ಹಿಡಿದು ಓಡಾಡುತ್ತಾರೆ. ಇದರ ಬಗ್ಗೆ ಮೋದಿ ಸೇರಿದಂತೆ ಬಿಜೆಪಿ ನಾಯಕರು ವ್ಯಂಗ್ಯ ಮಾಡುತ್ತಿದ್ದಾರೆ.
ಇದಕ್ಕೆ ರಾಹುಲ್ ಈ ರೀತಿ ತಿರುಗೇಟು ಕೊಟ್ಟಿದ್ದಾರೆ. ನಮ್ಮ ಸಂವಿಧಾನವು ಮಹಾತ್ಮಾ ಗಾಂಧೀಜಿ, ಬಿರ್ಸಾ ಮುಂಡಾ, ಡಾ ಬಿಆರ್ ಅಂಬೇಡ್ಕರ್ ಮುಂತಾದವರ ತತ್ವದ ಆಧಾರದಲ್ಲಿ ರಚಿಸಲಾಗಿದೆ. ಮೋದಿ ನಾನು ಸಂವಿಧಾನ ಪುಸ್ತಕ ಹಿಡಿದುಕೊಂಡಿದ್ದಕ್ಕೆ ಕೆಂಪು ಪುಸ್ತಕ ಹಿಡಿದುಕೊಂಡಿದ್ದೇನೆ ಎಂದು ತಮಾಷೆ ಮಾಡುತ್ತಾರೆ. ಅವರು ಅದನ್ನು ಓದಿಯೇ ಇಲ್ಲ ಅದಕ್ಕೇ ಅವರಿಗೆ ಹಾಗೆ ಕಾಣಿಸುತ್ತದೆ ಎಂದಿದ್ದಾರೆ.