Select Your Language

Notifications

webdunia
webdunia
webdunia
webdunia

ಸಣ್ಣ ವ್ಯಕ್ತಿಗಳೆಲ್ಲಾ ಪ್ರಧಾನಿ ಬಗ್ಗೆ ಕೀಳು ಭಾಷೆಯಲ್ಲಿ ಮಾತನಾಡಬಹುದಾ: ಛಲವಾದಿ ನಾರಾಯಣ ಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಮಂಗಳವಾರ, 12 ನವೆಂಬರ್ 2024 (14:50 IST)
ಬೆಂಗಳೂರು: ಕಾಂಗ್ರೆಸ್ ಸರಕಾರವು 38 ಇಲಾಖೆಗಳಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದೆಲ್ಲವನ್ನೂ ನಮ್ಮ ಮುಖಂಡರು ಒಂದೊಂದಾಗಿ ಬೆಳಕಿಗೆ ತರುತ್ತಿದ್ದಾರೆ. ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಕೂಪದಲ್ಲಿ ಕುಳಿತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕುಟುಂಬವು ಮುಡಾದ 14 ನಿವೇಶನ ವಾಪಸ್ ಮಾಡಿದ್ದು, ಪ್ರಿಯಾಂಕ್ ಖರ್ಗೆಯವರು 5 ಎಕರೆ ವಾಪಸ್ ಮಾಡಿದ್ದರಿಂದ ಭ್ರಷ್ಟಾಚಾರ ಸಾಬೀತಾಗಿದೆ. ಅದರ ತನಿಖೆ ಏನಿದ್ದರೂ ನಿಮ್ಮ ಕಸರತ್ತು ಅಷ್ಟೇ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರೇ, ನೀವು ಮಾತನಾಡುವಾಗ ಯಾವ ಮಟ್ಟಕ್ಕೆ ಹೋಗುತ್ತೀರಿ? ಪ್ರಧಾನಿಯವರ ಯೋಗ್ಯತೆ, ತಮ್ಮ ಯೋಗ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ವಯಸ್ಸು, ಅಧಿಕಾರದಲ್ಲಿ ನೀವು ಅವರ ಮಟ್ಟಕ್ಕಿದ್ದರೆ ಅವರನ್ನು ಪ್ರಶ್ನೆ ಮಾಡುವುದರಲ್ಲಿ ಅರ್ಥವಿದೆ. ಸಣ್ಣಸಣ್ಣ ವ್ಯಕ್ತಿಗಳೂ ಪ್ರಧಾನಮಂತ್ರಿಗಳನ್ನು ಕೀಳು ಭಾಷೆಯಲ್ಲಿ ಮಾತನಾಡುವುದು ಎಷ್ಟು ಸರಿ? ಎಂದು ಕೇಳಿದರು.
ಈಚೆಗೆ ವೈನ್ ಮರ್ಚೆಂಟ್ ಅಸೋಸಿಯೇಶನ್‍ನವರು ಒಂದು ಆಪಾದನೆ ಮಾಡಿದ್ದಾರೆ. ಸುಮಾರು 500 ಕೋಟಿಗಳಷ್ಟು ಹಣವನ್ನು ಅಬಕಾರಿ ಸಚಿವರು ವಸೂಲಿ ಮಾಡಿದ್ದಾಗಿ ಅವರೇ ಹೇಳಿದ್ದಾರೆ. ಬಳಿಕ ಸುಲಿಗೆ ನಮ್ಮ ಗಮನಕ್ಕೂ ಬಂದಿದ್ದು, 700 ಕೋಟಿ ಲೂಟಿಯಾಗಿದೆ ಎಂದು ನಾವು ತಿಳಿಸಿದ್ದೆವು. ಇದು ಚುನಾವಣೆ ನಡೆಯುವ ಕಾರಣ ನಡೆದಿದೆ. ಈ ವಿಚಾರವನ್ನು ನಮ್ಮ ಪ್ರಧಾನಿಗಳು ಮಹಾರಾಷ್ಟ್ರದ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು.
 
ಲಂಚದ ಹಣ ಎಲ್ಲಿ ಹೋಗುತ್ತದೆ?

ವೈನ್ ಮರ್ಚೆಂಟ್‍ಗಳಿಗೆ ಆಗುವ ತೊಂದರೆಗಳನ್ನು ಮುಂದಿಟ್ಟುಕೊಂಡು 25ರಂದು ಇಡೀ ರಾಜ್ಯದಲ್ಲಿ ಅಂಗಡಿ ಮುಂಗಟ್ಟುಗಳ ಬಾಗಿಲು ಹಾಕಿ ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಹೊಸದಾಗಿ ಲೈಸನ್ಸ್ ಪಡೆಯಲು 4.50 ಲಕ್ಷ ರೂ. ಸರಕಾರಿ ಶುಲ್ಕ ಕಟ್ಟಬೇಕಿದೆ. ಹೊಸ ಲೈಸನ್ಸ್ ಪಡೆಯಲು 70-80 ಲಕ್ಷ ಖರ್ಚಾಗುತ್ತದೆ. ಇದು ಎಲ್ಲಿ ಹೋಗುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.

ಒಂದು ವರ್ಷಕ್ಕೆ ಲೈಸನ್ಸ್ ನವೀಕರಿಸಲು 4.60 ಲಕ್ಷ ರೂ. ಕಟ್ಟಬೇಕು. 6 ಲಕ್ಷ ಲಂಚ ಕೊಡಬೇಕು. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಇದಾದ ನಂತರ ಏನೇ ದೂರುಗಳಿಲ್ಲದಿದ್ದರೂ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಅಥವಾ ಒಂದು ಮದ್ಯದ ಅಂಗಡಿಯವರ ಮೇಲೆ ಇಲಾಖೆಯು 2 ಕೇಸ್ ಕಡ್ಡಾಯವಾಗಿ ಹಾಕುತ್ತದೆ. ಆಪಾದನೆ ತಪ್ಪಿಸಲು ಕೇಸ್ ಹಾಕುವುದಲ್ಲದೆ, 2 ಸಾವಿರ ರೂ. ದಂಡ, 25 ಸಾವಿರ ಲಂಚ ಕೇಳುತ್ತಾರೆ ಎಂದು ಆರೋಪಿಸಿದರು.
 
ಅಬಕಾರಿ ಇಲಾಖೆ ಹಗರಣವನ್ನು ಅಲ್ಲಗಳೆಯುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀವು ಭ್ರಷ್ಟಾಚಾರ ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ. ಗುತ್ತಿಗೆದಾರರ ಸಂಘದವರು ಬಿಜೆಪಿ ಸರಕಾರ ಶೇ 40 ವಸೂಲಿ ಮಾಡುತ್ತಿದೆ ಎಂದು ಆಪಾದಿಸಿದ್ದರಲ್ಲವೇ? ಅದನ್ನು ಅವರು ಸಾಬೀತು ಪಡಿಸಿದ್ದಾರಾ? ನೀವು ಅದನ್ನು ಚುನಾವಣಾ ಮುಖ್ಯ ವಿಷಯ ಮಾಡಿಕೊಂಡಿರಲ್ಲವೇ? ಇದುವರೆಗೂ ಅದನ್ನು ಸಾಬೀತುಪಡಿಸಲು ನಿಮಗೆ ಆಗಿದೆಯೇ ಎಂದು ಪ್ರಶ್ನೆಗಳನ್ನು ಕೇಳಿದರು.

ಗುತ್ತಿಗೆದಾರರ ಸಂಘ ಸತ್ಯ ಹೇಳಿದ್ದೆಂದು ತಿಳಿಸುವ ಮತ್ತು ನಂಬುವ ಮುಖ್ಯಮಂತ್ರಿಗಳು ವೈನ್ ಮರ್ಚೆಂಟ್ ಅಸೋಸಿಯೇಶನ್‍ನ ಆರೋಪವನ್ನು ಅಲ್ಲಗಳೆಯಲು ಕಾರಣ ಏನಿದೆ? ಎಂದು ಕೇಳಿದರಲ್ಲದೆ, ಸಿದ್ದರಾಮಯ್ಯನವರು ಭ್ರಷ್ಟಾಚಾರದ ಪಿತಾಮಹ ಎಂದು ಆರೋಪಿಸಿದರು. ಮಾಡುವುದನ್ನು ಮಾಡಿ ಅದನ್ನು ಮರೆಮಾಚುವ ಪರಿಪಾಠವನ್ನು ಸಿಎಂ ಅವರು ಮೈಗೂಡಿಸಿಕೊಂಡಿದ್ದಾರೆ. ಪತ್ರಕರ್ತರು ಪ್ರಶ್ನಿಸಿದರೆ, ನೀನ್ಯಾರು ಕೇಳಲಿಕ್ಕೆ ಎನ್ನುತ್ತಾರೆ. ಪತ್ರಕರ್ತರು ಇರುವುದೇ ಸತ್ಯಾಂಶಗಳನ್ನು ಹೊರಕ್ಕೆ ತರಲು ಎಂದು ಗಮನ ಸೆಳೆದರು. 

ಭ್ರಷ್ಟಾಚಾರ ಮಾಡುವುದೇ ಅಬಕಾರಿ ಇಲಾಖೆ- ಸಚಿವರ ಕೆಲಸ. ಡಿ.ಸಿ.ಗಳು, ಎ.ಸಿಗಳಿಗೆ ವರ್ಗಾವಣೆಗೂ ಹಣ ನಿಗದಿಯಾಗಿದೆ ಎಂದು ದೂರಿದರು. ಮದ್ಯಪಾನ ಸಂಯಮ ಮಂಡಳಿ ಕುಡಿಯಬಾರದೆಂದು ಗಾಂಧೀಜಿ ತತ್ವಗಳನ್ನು ಮುಂದಿಟ್ಟರೆ, ಸರಕಾರ ಅಬಕಾರಿ ಇಲಾಖೆಗೆ ಹೆಚ್ಚು ಮಾರಾಟದ, ಹಣ ಸಂಗ್ರಹದ ವಿಚಾರದಲ್ಲಿ ತನ್ನ ಗುರಿ ನಿಗದಿ ಮಾಡುತ್ತದೆ ಎಂದು ಟೀಕಿಸಿದರು.
 
3 ಉಪ ಚುನಾವಣೆಗಳಲ್ಲಿ ಹೆಂಡದ ಹಣದ ಹೊಳೆ
ಶ್ರೀಮಂತರು ಹೇಗೋ ಕುಡಿದುಕೊಳ್ಳುತ್ತಾರೆ. ಬಡವರು ಇಲ್ಲಿ ಟಾರ್ಗೆಟ್ ಆಗುತ್ತಾರೆ. ಗ್ಯಾರಂಟಿ ಜಾರಿ ಕುರಿತು ಹೇಳಿ ಮದ್ಯದ ಬೆಲೆ ಏರಿಸುತ್ತಾರೆ. ವೈನ್ ಮಾರಾಟಗಾರರ ಸಂಘದ ಆಪಾದನೆ ಮೇಲೆ ಸಿಎಂ ಕ್ರಮ ಜರುಗಿಸಿದ್ದಾರಾ? ತಲೆಯನ್ನೇ ಕೆಡಿಸಿಕೊಂಡಿಲ್ಲ. ಈ 3 ಉಪ ಚುನಾವಣೆಗಳಲ್ಲಿ ಹೆಂಡದ ಹಣದ ಹೊಳೆ ಹರಿದಿದೆ. ಕಾಂಗ್ರೆಸ್ಸಿನವರು ಗೆದ್ದೇಗೆಲ್ಲುವುದಾಗಿ ಹೇಳುತ್ತಿದ್ದಾರೆ. ನಿಮ್ಮ ನಾಲಿಗೆಗಳನ್ನು ಎಷ್ಟು ಹರಿಬಿಟ್ಟಿದ್ದೀರೆಂದು ಜನರು ನೋಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
 
ರಾಜ್ಯದ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರಲ್ಲದೆ, ರಾಜ್ಯ ಸರಕಾರದ ಭ್ರಷ್ಟಾಚಾರ, ಹಗರಣಗಳನ್ನು ಬಯಲಿಗೆ ತರುವ ಮೂಲಕ ಆ ಕುರಿತು ಪದೇಪದೇ ಗಮನ ಸೆಳೆಯಲಾಗುತ್ತಿದೆ ಎಂದು ತಿಳಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಮರಿಗೆ ಮೀಸಲಾತಿ, ನಾನು ಪತ್ರವೇ ಬರೆದಿಲ್ಲ ಎಂದ ಜಮೀರ್ ಅಹ್ಮದ್